ದಾಬೋಲ್ಕರ್, ಕಲಬುರಗಿ, ಗೌರಿ ಹತ್ಯೆ: ಮೂರು ಕೊಲೆ, ನಾಲ್ಕು ಸಾಮ್ಯತೆ
ಗೌರಿ ಲಂಕೇಶ್, ಕಲಬುರಗಿ, ದಾಬೋಲ್ಕರ್ ಹತ್ಯೆಗಳಲ್ಲಿ ಹಲವಾರು ಸಾಮ್ಯತೆ. ಕೆಲವು ಸುದ್ದಿ ವಾಹಿನಿಗಳ ವಿಶ್ಲೇಷಣೆ.
ಬೆಂಗಳೂರು, ಸೆಪ್ಟೆಂಬರ್ 6: ಮಂಗಳವಾರ ರಾತ್ರಿ ನಡೆದಿರುವ ಹಿರಿಯ ಪತ್ರಕರ್ತೆ ಹಾಗೂ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆಯು ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಯ ಮುಂದುವರಿದ ಭಾಗ ಎಂಬುದನ್ನು ಸಾಬೀತುಪಡಿಸುವಂಥ ಕೆಲವಾರು ಸಾಮ್ಯತೆಗಳು ಇವೆ ಎಂದು ಕೆಲ ವಾಹಿನಿಗಳು ಅಭಿಪ್ರಾಯಪಟ್ಟಿವೆ.
2013ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯಾಗಿತ್ತು. 2015ರಲ್ಲಿ ಕನ್ನಡದ ಸಾಹಿತಿ ಹಾಗೂ ಚಿಂತಕ ಎಂ.ಎಂ. ಕಲಬುರಗಿಯವರನ್ನು ಧಾರವಾಡದಲ್ಲಿ ಹತ್ಯೆ ಮಾಡಲಾಗಿತ್ತು. ಇದೀಗ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ.

ಈ ಮೂರು ಕೊಲೆಗಳು ಪ್ರತ್ಯೇಕ ಪ್ರಕರಣಗಳಾಗಿದ್ದರೂ ಇದರಲ್ಲಿ ಹಂತಕರು ಅನುಸರಿಸುವ ವಿಧಾನಗಳು ಕೆಲವಾರು ಸ್ವಾಮ್ಯತೆಗಳಿದ್ದು, ದಾಬೋಲ್ಕರ್, ಕಲುಬರಗಿಯವನ್ನು ಕೊಂದವರೇ ಈಗ ಗೌರಿ ಅವರನ್ನೂ ಕೊಂದಿದ್ದಾರೆಂದು 'ನ್ಯೂಸ್ ಎಕ್ಸ್' ವಾಹಿನಿ ಹೇಳಿದೆ.

ಪ್ರತಿ ಕೊಲೆಗೂ ಸರಿಯಾಗಿ 2 ವರ್ಷ ಅಂತರ!
ದಾಬೋಲ್ಕರ್, ಕಲಬುರಗಿ ಹಾಗೂ ಗೌರಿ ಲಂಕೇಶ್ ಹತ್ಯೆಗಳು ಹೆಚ್ಚು ಕಡಿಮೆ ಒಂದೇ ದಿನದಂದು ನಡೆದಿವೆ. ದಾಬೋಲ್ಕರ್ ಹತ್ಯೆಯು 2013ರ ಆಗಸ್ಟ್ 30ರಂದು ನಡೆದಿದ್ದರೆ, ಕಲಬುರಗಿ ಹತ್ಯೆಯು 2015ರ ಆಗಸ್ಟ್ 30ರಂದು ನಡೆದಿದೆ. ಆ ಎರಡೂ ಕೊಲೆಗಳ ನಡುವೆ ಸರಿಯಾಗಿ ಎರಡು ವರ್ಷಗಳ ಅಂತರವಿದೆ. ಕಲಬುರಗಿ ಹತ್ಯೆ ನಡೆದು ಸರಿಯಾಗಿ 2 ವರ್ಷ ಕಳೆದ ಮೇಲೆ ಈಗ, ಗೌರಿ ಲಂಕೇಶ್ ಹತ್ಯೆಯಾಗಿದೆ. ಇದು ಈ ಮೂರೂ ಕೊಲೆಗಳ ನಡುವೆ ಇರುವ ಮೊದಲ ಸಾಮ್ಯತೆ.

ಮೂರು ಪ್ರಕರಣಗಳಲ್ಲಿ ನಾಡ ಪಿಸ್ತೂಲು
ದಾಬೋಲ್ಕರ್ ಹತ್ಯೆಗೂ ಕಂಟ್ರಿ ಪಿಸ್ತೂಲ್ ಅನ್ನು ಬಳಸಲಾಗಿತ್ತು. ಇನ್ನು ಕಲಬುರಗಿ ಹತ್ಯೆಗೂ ಕಂಟ್ರಿ ಪಿಸ್ತೂಲನ್ನೇ ಬಳಸಲಾಗಿತ್ತು. ಇದೀಗ, ಗೌರಿ ಲಂಕೇಶ್ ಹತ್ಯೆಗೂ ಕಂಟ್ರಿ ಪಿಸ್ತೂಲನ್ನೇ ಬಳಸಲಾಗಿದೆ. ದಾಬೋಲ್ಕರ್ ಅವರ ವಿರುದ್ಧ 4 ಸುತ್ತು, ಕಲಬುರಗಿ ವಿರುದ್ಧ 2 ಸುತ್ತು ಹಾಗೂ ಗೌರಿ ಲಂಕೇಶ್ ವಿರುದ್ಧ 7 ಸುತ್ತು ಗುಂಡು ಹಾರಿವೆ.

ಎಲ್ಲವೂ ಪಾಯಿಂಟ್ ಬ್ಲಾಂಕ್ ರೇಜ್ ಶೂಟ್ ಗಳೇ!
ಮೂವರನ್ನೂ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲೇ ಹತ್ಯೆ ಮಾಡಲಾಗಿರುವುದು ಮತ್ತೊಂದು ಸಾಮ್ಯತೆ. ಅಲ್ಲದೆ, ಈ ಕೊಲೆಗಳನ್ನು ಮಾಡಲು ಇಬ್ಬರಿಂದ ಮೂವರಷ್ಟೇ ಬಂದಿದ್ದು ಮತ್ತೊಂದು ಸಾಮ್ಯತೆ. ದಾಬೋಲ್ಕರ್, ಕಲಬುರಗಿ ಹತ್ಯೆಗೆ ಇಬ್ಬರು ಬಂದಿದ್ದರೆ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಮೂವರು ಬಂದಿದ್ದಾರೆ. ಅಲ್ಲದೆ, ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಹಂತಕರು ಪರಾರಿ.

ಹಣೆ, ದೇಹಕ್ಕೆ ಮಾತ್ರ ಗುರಿ
ಈ ಮೂವರ ಕಡೆಗೆ ಗುಂಡು ಹಾರಿಸಿರುವ ರೀತಿಯೂ ಹೆಚ್ಚು ಕಡಿಮೆ ಸಾಮ್ಯತೆಯಿಂದಲೇ ಕೂಡಿದೆ. ದಾಬೋಲ್ಕರ್ ಅವರಿಗೆ ತಲೆ ಹಾಗೂ ಎದೆಗೆ ಗುಂಡು ಹೊಡೆದಿದ್ದರೆ, ಕಲಬುರಗಿ ಅವರಿಗೆ ಹಣ ಹಾಗೂ ದೇಹಕ್ಕೆ ಗುಂಡು ಹೊಡೆಯಲಾಗಿತ್ತು. ಗೌರಿಯವರಿಗೂ ಹಣೆ ಹಾಗೂ ಎದೆಗೆ ಗುಂಡು ಹೊಡೆಯಲಾಗಿದೆ.












Click it and Unblock the Notifications