ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತಾ?
ಬೆಂಗಳೂರು, ಆ.21 : ಪೀಣ್ಯದಲ್ಲಿ ನಿರ್ಮಿಸಿರುವ ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಲೋಕಾರ್ಪಣೆ ಮಾಡಿದ್ದಾರೆ. ಸುಮಾರು 39 ಕೋಟಿ ವೆಚ್ಚದಲ್ಲಿ, ಆರು ಎಕರೆ ಪ್ರದೇಶದಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.
ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನಿಲ್ದಾಣವನ್ನು ಉದ್ಘಾಟಿಸಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಸವೇಶ್ವರ ಬಸ್ ನಿಲ್ದಾಣ ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. [ಪೀಣ್ಯ ಅಭಿವೃದ್ಧಿಗೆ 15 ಕೋಟಿ ಯೋಜನೆ]
ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗೇಜ್ ಕೊಠಡಿ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್, ವಿಚಾರಣಾ ಕೇಂದ್ರಗಳು ಇವುಗಳಲ್ಲಿ ಸೇರಿವೆ. ತಳಮಹಡಿಯಿಂದ ಬೇರೆ ಅಂತಸ್ತುಗಳಿಗೆ ತೆರಳಲು ಎಸ್ಕಲೇಟರ್ ಮತ್ತು ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಚಿತ್ರಗಳಲ್ಲಿ ನೋಡಿ ಬಸ್ ನಿಲ್ದಾಣ ಉದ್ಘಾಟನೆ

39 ಕೋಟಿ ವೆಚ್ಚದ ಬಸ್ ನಿಲ್ದಾಣ
39.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಲೋಕಾಪರ್ಣೆ ಮಾಡಿದ್ದಾರೆ. ಆರು ಎಕರೆ ಪ್ರದೇಶದಲ್ಲಿ ಈ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿಂದ ಉತ್ತರ ಕರ್ನಾಟಕದ ಜನರು ಪ್ರಯಾಣಿಸುವುದರಿಂದ ನಿಲ್ದಾಣಕ್ಕೆ ಬಸವೇಶ್ವರ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ.

ಎರಡು ಅಂತಸ್ತಿನ ಕಟ್ಟಡ
ಎರಡು ಅಂತಸ್ತಿನ ಈ ನಿಲ್ದಾಣದ ತಳಮಹಡಿಯಲ್ಲಿ ಬಿಎಂಟಿಸಿ 'ಬಸ್ ಬೇ'ಗೆ ಜಾಗ ಮಾಡಿಕೊಡಲಾಗಿದೆ. ಅಲ್ಲಿಯೇ ದ್ವಿಚಕ್ರ ವಾಹನ ಮತ್ತು ಕಾರುಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸಲಾಗಿದೆ. ಕೆಎಸ್‌ಆರ್‌ಟಿಸಿ ಡಿಪೋ ಮತ್ತು ನಿಲ್ದಾಣವಿದೆ. ಸೆ.1ರಿಂದ ಈ ನಿಲ್ದಾಣ ಕಾರ್ಯಾರಂಭ ಮಾಡಲಿದೆ.

ನಾಲ್ಕು ದಿಕ್ಕುಗಳಲ್ಲಿ ನಿಲ್ದಾಣದ ಯೋಜನೆ
ಬೆಂಗಳೂರು ನಗರದ ನಾಲ್ಕು ದಿಕ್ಕುಗಳಲ್ಲೂ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಕೆಎಸ್ಆರ್‌ಟಿಸಿ ಯೋಜನೆ. ಈಗಾಗಲೇ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ನಿಲ್ದಾಣ ನಿರ್ಮಾಣವಾಗಿದೆ.

ನಿಲ್ದಾಣಗಳ ಸ್ಥಳಾಂತರ
ಉತ್ತರ ಕರ್ನಾಟಕ ಹಾಗೂ ಮಂಗಳೂರು ಭಾಗದಿಂದ ತುಮಕೂರು ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಪ್ರವೇಶಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರ ಮಾಡುವ ಯೋಜನೆ ರೂಪಿಸಲಾಗಿದೆ. ಮುಂಬೈ, ಪಣಜಿ, ಗೋವಾ, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ವಿಜಾಪುರ, ಬೀದರ್, ಮಂಗಳೂರು, ಉಡುಪಿ, ಧರ್ಮಸ್ಥಳ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಕಡೆ ಸಂಚರಿಸುವ ಬಸ್ಸುಗಳು ಇಲ್ಲಿಂದಲೇ ಕಾರ್ಯ ನಿರ್ವಹಿಸಲಿವೆ.

ಸಂಪರ್ಕ ಸೇವೆ ಲಭ್ಯ
ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗಲು ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಪ್ರತಿ ಐದು ನಿಮಿಷಕ್ಕೊಮ್ಮೆ 'ಸಂಪರ್ಕ ಸಾರಿಗೆ' ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 30 ಸಂಪರ್ಕ ಸಾರಿಗೆ ಬಸ್‌ಗಳನ್ನು ಸಂಚಾರಕ್ಕೆ ಬಿಡಲು ಕೆಎಸ್‌ಆರ್‌ಟಿಸಿ ಯೋಜನೆ ತಯಾರಿಸಿದೆ.

ಬಿಎಂಟಿಸಿ ಬಸ್ಸುಗಳು ಬರುತ್ತವೆ
ಕೆ.ಆರ್ ಮಾರುಕಟ್ಟೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ, ನೆಲಮಂಗಲ, ಜಾಲಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಿಎಂಟಿಸಿ ಬಸ್ಸುಗಳು ಸ್ಯಾಟಲೈಟ್ ನಿಲ್ದಾಣದ ಮೂಲಕ ಹಾದು ಹೋಗಲಿವೆ. ಪೀಣ್ಯಕ್ಕೆ ಮೆಟ್ರೋ ರೈಲು ಸಂಪರ್ಕ ಸಹ ಇತ್ತೀಚೆಗೆ ಆರಂಭವಾಗಿದೆ.












Click it and Unblock the Notifications