ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧ್ವಜದ ಬಗ್ಗೆ ಸಿಎಂ ಲೇಖನ; 13 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ತ್ರಿವರ್ಣ ಧ್ವಜದ ಬಗ್ಗೆ ಏಕೆ ತ್ರಿವರ್ಣಧ್ವಜ? ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಲೇಖನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ವಿವರಣೆ ಓದಿ ಸಂತೋಷವಾಯಿತು ಎಂದಿರುವ ಅವರು ಬೊಮ್ಮಾಯಿ ಅವರಿಗೆ ಹದಿಮೂರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಏಕೆ ತ್ರಿವರ್ಣಧ್ವಜ? ಎಂಬ ನಿಮ್ಮ ವಿವರಣೆ ಓದಿ ಸಂತೋಷವಾಯಿತು. ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದ್ದಕ್ಕಾಗಿ ರಾಜ್ಯದ ಜನರ ಪರವಾಗಿ ನಿಮಗೆ ಧನ್ಯವಾದಗಳು. ಇದರ ಜೊತೆಗೆ ಜನರ ಪರವಾಗಿ ನಾನು ಕೇಳುವ ಹದಿಮೂರು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವಿರೆಂದು ನಂಬಿದ್ದೇನೆ" ಎಂದಿದ್ದಾರೆ.

ಚಿತ್ರಗಳ ಸಹಿತ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಕಿರುವ ಪ್ರಶ್ನೆಗಳು ಈ ಕೆಳಗಿನಂತಿವೆ.

Siddaramaiah ask questions to CM Basavaraj Bommai Over Govt allows manufacture polyester national flags

1. ಸ್ವತಂತ್ರ ಭಾರತದಲ್ಲಿ 52 ವರ್ಷಗಳ ವರೆಗೆ ದೇಶ ಹೆಮ್ಮೆ ಪಡುವ ರಾಷ್ಟ್ರಧ್ವಜವನ್ನು ಆರ್ಎಸ್ಎಸ್ ಕಚೇರಿ ಮೇಲೆ ಹಾರಿಸದೆ ಇರಲು ಕಾರಣವೇನು? 2001ರಲ್ಲಿ ದೇಶಭಕ್ತ ಯುವಕರು ರಾಷ್ಟ್ರಧ್ವಜ ಹಾರಿಸಲು ಬಂದಾಗ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿರುವುದು ಏಕೆ?

2. ದೇಶಕ್ಕೆ ತ್ರಿವರ್ಣ ಧ್ವಜ ಅಲ್ಲ ಭಗವಾಧ್ವಜವೇ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಆರ್ ಎಸ್ ಎಸ್ ಸರಸಂಘಚಾಲಕರಾದ ಕೆ.ಬಿ.ಹೆಡಗೆವಾರ್, ಎಂ.ಎಸ್ ಗೋಲ್ವಾಲ್ಕರ್ ಅವರ ನಿಲುವಿನ ಬಗ್ಗೆ ನಿಮ್ಮ ಮತ್ತು ನಿಮ್ಮ ಪಕ್ಷದ ಈಗಿನ ಅಭಿಪ್ರಾಯವೇನು.?

3. ತ್ರಿವರ್ಣ ಧ್ವಜ ರಾಷ್ಟ್ರೀಯ ಮುನ್ನೋಟ, ಸತ್ಯ, ಇತಿಹಾಸ ಇಲ್ಲವೇ ಪರಂಪರೆಯಿಂದ ಪ್ರೇರಣೆ ಪಡೆದು ತಯಾರಿಸಿದ್ದಲ್ಲ, ಇದು ಫ್ರೆಂಚ್ ಕ್ರಾಂತಿಯ ಘೋಷಣೆಗಳ ಎರವಲು" ಎಂದು ಆರ್ ಎಸ್ ಎಸ್ ಸರಸಂಘಚಾಲಕ ಗೋಲ್ವಾಲ್ಕರ್ ತಮ್ಮ 'ಬಂಚ್ ಆಫ್ ಥಾಟ್ಸ್" ನಲ್ಲಿ ಹೇಳಿರುವುದನ್ನು ನೀವು ಧಿಕ್ಕರಿಸುತ್ತೀರಾ?

4. ತ್ರಿವರ್ಣ ಧ್ವಜ ಎನ್ನುವುದು ಫ್ರೆಂಚ್ ಕ್ರಾಂತಿಯ ಘೋಷಣೆಗಳಾದ ಸ್ವಾತಂತ್ರ್ಯ, ಸಮಾನತೆ, ಮತ್ತು ಭಾತೃತ್ವದ ಬಗೆಗಿನ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಗೀಳಿನಿಂದ ಹುಟ್ಟು ಪಡೆದಿರುವುದು" ಎಂದು ಗೋಲ್ವಾಲ್ಕರ್ ಹೇಳಿರುವುದನ್ನು ಈಗಲೂ ನೀವು ಒಪ್ಪುವಿರಾ?

Siddaramaiah ask questions to CM Basavaraj Bommai Over Govt allows manufacture polyester national flags

5. ರಾಷ್ಟ್ರಧ್ವಜವನ್ನು ಭಾರತೀಯರು ಒಪ್ಪಲಾರರು, ಮೂರು ಎನ್ನುವುದೇ ಅಪಶಕುನ. ತ್ರಿವರ್ಣಧ್ವಜ ಖಂಡಿತ ದೇಶದ ಮೇಲೆ ಮಾನಸಿಕವಾಗಿ ದುಷ್ಪರಿಣಾಮವನ್ನು ಬೀರಲಿರುವುದು ಮಾತ್ರವಲ್ಲ ಹಾನಿಕಾರಿಯಾಗಬಹುದು" ಎಂದು 1947ರಲ್ಲಿಯೇ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಪ್ರಕಟಿಸಿದ್ದ ಲೇಖನವನ್ನು ನೀವು ಒಪ್ಪುವಿರಾ?

6. ರಾಷ್ಟ್ರಧ್ವಜದ ಬಗೆಗಿನ ನಿಲುವನ್ನು ಆರ್ಎಸ್ಎಸ್ ಬದಲಾಯಿಸಿಕೊಂಡು 'ಹರ್ ಘರ್ ಮೇ ತಿರಂಗಾ' ಕಾರ್ಯಕ್ರಮವನ್ನು ಬೆಂಬಲಿಸುತ್ತದೆ ಎಂದು ನಿಮಗನಿಸುತ್ತಿದೆಯೇ? ಬದಲಾಯಿಸಿಕೊಂಡಿದ್ದರೆ ಅದಕ್ಕೆ ಕಾರಣಗಳೇನು ಎಂದು ತಿಳಿಸುವಿರಾ?

7. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ದೇಶದ ಜನ ತಮ್ಮ ಟ್ವೀಟರ್ ಡಿಪಿಯಲ್ಲಿ ರಾಷ್ಟ್ರಧ್ವಜವನ್ನ ಹಾಕಬೇಕೆಂದು ತಿಳಿಸಿದರೂ ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮಾತ್ರ ಪ್ರಧಾನಿ ಕರೆಯನ್ನು ಪಾಲಿಸದೆ ಇರಲು ಕಾರಣವೇನು?

8. ಕಳೆದ 75 ವರ್ಷಗಳಿಂದ ಚಾಲ್ತಿಯಲ್ಲಿದ್ದ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಹತ್ತಿ ಮತ್ತು ರೇಷ್ಮೆ ಬಟ್ಟೆಯ ಬದಲಿಗೆ ಪಾಲಿಸ್ಟರ್ ಬಟ್ಟೆಯಲ್ಲಿಯೂ ರಾಷ್ಟ್ರಧ್ವಜ ತಯಾರಿಸಲು ಅನುಮತಿ ನೀಡಿರುವುದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ನಿಮಗೆ ಅನಿಸುವುದಿಲ್ಲವೇ?

9. ಮೇಕ್ ಇನ್ ಇಂಡಿಯಾದ ಪ್ರಚಾರ ಮಾಡುವ ಬಿಜೆಪಿ ಸರ್ಕಾರ ಧ್ವಜಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆ ಬಳಸಲು ಅವಕಾಶ ನೀಡಿರುವುದರಿಂದ ಚೀನಾದಂತಹ ದೇಶಗಳಿಂದ ಕಡಿಮೆ ಬೆಲೆಯ ರಾಷ್ಟ್ರಧ್ವಜಗಳು ಬಂದು ರಾಶಿಬೀಳುತ್ತಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

10. ಪಾಲಿಸ್ಟರ್ ಬಟ್ಟೆ ಬಳಸಲು ಅವಕಾಶ ನೀಡಿರುವುದು ರಾಷ್ಟ್ರಧ್ವಜವನ್ನು ಜನಪ್ರಿಯಗೊಳಿಸಲಿಕ್ಕಾಗಿಯೇ? ಇಲ್ಲವೇ ನಿಮ್ಮ ಪಕ್ಷದ ಪೋಷಕರಾದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿಕ್ಕಾಗಿಯೇ?

11. ಪಾಲಿಸ್ಟರ್ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆಗೆ ಅವಕಾಶ ನೀಡುವಾಗ ಇಡೀ ದೇಶಕ್ಕೆ ರಾಷ್ಟ್ರಧ್ವಜ ತಯಾರಿಸಿಕೊಡುತ್ತಿದ್ದ ಹುಬ್ಬಳ್ಳಿಯ ಬೆಂಗೇರಿ ಮತ್ತು ಧಾರವಾಡದ ಗರಗ ಖಾದಿ ಕೇಂದ್ರಗಳಿಗೆ ಆಗುವ ಅನ್ಯಾಯವನ್ನು ನೀವು ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಿಲ್ಲವೇ?

12. ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಬಟ್ಟೆ ಬಳಕೆಗೂ ಅವಕಾಶ ನೀಡಿರುವುದರಿಂದ ಗರಗ ಖಾದಿ ಗ್ರಾಮದ್ಯೋಗ ಕೇಂದ್ರದ ನೂರಾರು ಕಾರ್ಮಿಕರು ಮುಷ್ಕರದಲ್ಲಿ ತೊಡಗಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?

13. ಪ್ರಧಾನಿ ಮೋದಿ ಅವರು ನೀಡಿರುವ ಕರೆಯನ್ನು ಪಾಲಿಸುವ ಏಕೈಕ ಕಾರಣಕ್ಕಾಗಿ ಸಾಮಾನ್ಯ ಜನರಿಂದ ಬಲಾತ್ಕಾರವಾಗಿ ದುಡ್ಡು ಕಿತ್ತುಕೊಂಡು ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತಿರುವ ನೀವು, ಈ ಮೂಲಕ ರಾಷ್ಟ್ರಧ್ವಜದ ಮೇಲಿನ ಗೌರವಕ್ಕೆ ಕುಂದುತರುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
Siddaramaiah ask questions to CM Basavaraj Bommai Over govt allows manufacture and import of machine-made polyester national flags. Don't you think it is an insult to the national flag to allow the manufacture of the national flag in polyester fabric instead of cotton and silk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X