ಕೃಷ್ಣಮಠದಲ್ಲಿ ಮೋದಿಗೆ ಜೀವ ಬೆದರಿಕೆ ಇತ್ತು: ಶೋಭಾ
ಬೆಂಗಳೂರು, ಮೇ 2: ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡದೆ ಇರಲು ಜೀವ ಬೆದರಿಕೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚುನಾವಣಾ ಪ್ರಚಾರಕ್ಕೆಂದು ಮಂಗಳವಾರ ಉಡುಪಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಅವರ ವೇಳಾಪಟ್ಟಿಯಲ್ಲಿಯೂ ಉಡುಪಿ ಮಠದ ಭೇಟಿ ಇರಲಿಲ್ಲ. ಮಠದಲ್ಲಿ ಎರಡು ದಿನಗಳಿಂದ ತಪಾಸಣೆ ನಡೆಸಿದ್ದಲ್ಲದೆ, ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಹೀಗಾಗಿ ಅವರು ಪ್ರಚಾರ ಭಾಷಣ ಮುಗಿಸಿ ಅಲ್ಲಿಗೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಕೃಷ್ಣಮಠದಲ್ಲಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಅಲ್ಲಿಗೆ ಹೋಗುವುದು ಸೂಕ್ತವಲ್ಲ ಎಂದು ಎಸ್‌ಪಿಜಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಪ್ರಧಾನಿಯಾಗಿ ಭದ್ರತಾ ಸುರಕ್ಷತೆಗಳನ್ನು ಪಾಲಿಸಬೇಕಾಗಿರುವುದರಿಂದ ಅವರು ಮಠಕ್ಕೆ ಭೇಟಿ ನೀಡಲಿಲ್ಲ ಎಂದು ಶೋಭಾ ಕರಂದ್ಲಾಜೆ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಠಕ್ಕೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರ ಬಗ್ಗೆ ಮೋದಿ ಅವರಲ್ಲಿ ಬೇಸರವಿದೆ ಎಂದು ಅವರು ತಿಳಿಸಿದರು. ಅಲ್ಲಿನ ಮಠಾಧೀಶರುಗಳು ಆತ್ಮೀಯರು. ಈ ಹಿಂದೆ ಹಲವು ಸಲ ಭೇಟಿ ನೀಡಿದ್ದೇನೆ. ಆದರೆ, ಭದ್ರತಾ ಕಾರಣದಿಂದ ಹೋಗುವಂತಿಲ್ಲ ಎಂದು ಮೋದಿ ಹೇಳಿರುವುದಾಗಿ ಶೋಭಾ ತಿಳಿಸಿದರು.
ಕಾಂಗ್ರೆಸ್‌ನಿಂದ ಹತಾಶೆ ರಾಜಕಾರಣ
ಕಾಂಗ್ರೆಸ್ ಪಕ್ಷವು ಸೋಲುವ ಹತಾಶೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ. ಕಟೌಟ್‌ಗಳನ್ನು ಹರಿದುಹಾಕಿ, ಪ್ರಚಾರ ವಾಹನಗಳನ್ನು ಹಾನಿ ಮಾಡುವ ಮೂಲಕ ತನ್ನ ಹತಾಶೆಯ ಮನಸ್ಥಿತಿ ಪ್ರದರ್ಶಿಸುತ್ತಿದೆ ಎಂದು ಶೋಭಾ ಆರೋಪಿಸಿದರು.
ಸೋಲು ಖಚಿತವಾಗಿ ಕಂಗಾಲಾಗಿರುವ ಕಾಂಗ್ರೆಸ್, ವೈಯಕ್ತಿಕ ನಿಂದನೆಗಳನ್ನು ಆರಂಭಿಸಿದೆ. ಕೀಳುಮಟ್ಟದ ಭಾಷಣಗಳನ್ನು ಮಾಡುವ ದುಃಸ್ಥಿತಿಗೆ ಕಾಂಗ್ರೆಸ್ ಇಳಿದಿದೆ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಮೋದಿ ವಿರುದ್ಧ ಇದೇ ರೀತಿ ವೈಯಕ್ತಿಕ ನಿಂದನೆ ನಡೆಸಿದ್ದರು. ಅದರ ಪರಿಣಾಮ ನಮ್ಮ ಮುಂದೆ ಇದೆ. ಅತಿ ಹಳೆಯ ರಾಜಕೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್, ನಾನೂರು ಸೀಟುಗಳಿಂದ ನಲವತ್ತಕ್ಕೆ ಇಳಿದಿರುವುದಕ್ಕೆ ಅದರ ಈ ರೀತಿಯ ಮನಸ್ಥಿತಿಯೇ ಕಾರಣ ಎಂದರು.












Click it and Unblock the Notifications