Namma Metro: ಹೆಬ್ಬಾಳದಲ್ಲಿ 45ಎಕರೆ ಜಾಗ ಮೆಟ್ರೋಗೆ ಹಸ್ತಾಂತರಿಸಿ: ಸಿಎಂಗೆ ಶೋಭಾ ಕರಂದ್ಲಾಜೆ ಮನವಿ
ಬೆಂಗಳೂರು, ನವೆಂಬರ್ 09: ನಗರದ ನಮ್ಮ ಮೆಟ್ರೋ ಯೋಜನೆಗಳ ಪೈಕಿ ನೀಲಿ ಮಾರ್ಗ ಹಾಗೂ ವಿವಿಧ ಸಾರಿಗೆಗಳು ಸಂಪರ್ಕಿಸುವ ಬಹುಮಾದರಿ ಸಾರಿಗೆ ಕೇಂದ್ರವಾಗಲಿರುವ ಹೆಬ್ಬಾಳ ಪ್ರದೇಶದಲ್ಲಿ BMRCLಗೆ ಅಗತ್ಯ ಜಾಗ ಸಿಗದೇ ಹೊಸ ಯೋಜನೆ ವಿಳಂಬವಾಗುತ್ತಿದೆ. ಈ ಕುರಿತು ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಜಾಗಕ್ಕಾಗಿ ಮನವಿ ಮಾಡಿದ್ದಾರೆ.
ಹೆಬ್ಬಾಳದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (KIADB) ಸೇರಿದ 45 ಎಕರೆ ಜಾಗ ನೀಡುವಂತೆ ಬೇಡಿಕೆ ಇಡಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಅಗತ್ಯ ಜಾಗ ನಮ್ಮ ಮೆಟ್ರೋಗೆ ನೀಡುವಂತೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.

ಹೆಬ್ಬಾಳದಲ್ಲಿ ಸಾರಿಗೆಯ ಪ್ರಮುಖ ಕೇಂದ್ರ
ಹೆಬ್ಬಾಳದಲ್ಲಿ ಕೆಐಎಡಿಬಿಗೆ ಸೇರಿರುವ 45 ಎಕರೆ ಜಾಗ ನೀಡಿದರೆ, ನಮ್ಮ ಮೆಟ್ರೋ, ಉಪನಗರ ರೈಲು, ಬಿಎಂಟಿಸಿ ಮೆಟ್ರೋ ಸೇರಿದಂತೆ ಉದ್ದೇಶಿತ ಸಾರಿಗೆಯ ಹಬ್ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ. ಆದ್ದರಿಂದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಆಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಗೆ ತ್ವರಿತ ಕ್ರಮ ಕೈಗೊಳ್ಳೂವಂತೆ ಅವರು ಒತ್ತಾಯಿಸಿದ್ದಾರೆ.
ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆಯಲ್ಲಿ ಬಹು ಮಾದರಿ ಸಾರಿಗೆ ಕೇಂದ್ರವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಗೆ ಜಾಗ ಅಗತ್ಯವಾಗಿದೆ. ಕೆಐಎಡಿಬಿ ವ್ಯಾಪ್ತಿಗೆ ಸೇರಿದ 45 ಎಕರೆ ಭೂಮಿ ನೀಡಿದರೆ, ಅದಕ್ಕೆ BMRCL ಅಧಿಕಾರಿಗಳು KIADB ನಿರ್ಧರಿಸಿದ ಸೂಕ್ತ ಪರಿಹಾರವನ್ನು ಆಯಾ ಭೂಮಿ ಮಾಲೀಕರಿಗೆ ನೀಡಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಹೆಬ್ಬಾಳದಲ್ಲಿ ಏನೆಲ್ಲ ನಿರ್ಮಾಣವಾಗಲಿದೆ?
ಈ ಹೆಬ್ಬಾಳದಲ್ಲಿ ಭೂಮಿ ಪಡೆದರೆ ಬಿಎಂಆರ್‌ಸಿಎಲ್ ಅತ್ಯಾಧುನಿಕ ಬಹು-ಮಾದರಿ ಸಾರಿಗೆ ಕೇಂದ್ರವನ್ನಾಗಿ ಪರಿವರ್ತಿಸುತ್ತದೆ. ಅದಕ್ಕಾಗಿ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿ ನೀಲಿ ಮಾರ್ಗ ಹಾದು ಹೋಗಲಿದೆ. ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್, ಆಧುನಿಕ ಡಿಪೋ ಹಾಗೂ ಸಾರಿಗೆಗೆ ಸಂಬಂಧಿಸಿದ ಇತರ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವ ಕೇಂದ್ರ ನಿರ್ಮಿಸಲು ಪ್ಲಾನ್ ಮಾಡಿಕೊಂಡಿದೆ.

ಇದು ನಿರ್ಮಾಣವಾದರೆ, ಬೆಂಗಳೂರು ನಮ್ಮ ಮೆಟ್ರೋದ ಕಾರ್ಯಾಚರಣೆಯ ಶಕ್ತಿ ಇನ್ನಷ್ಟು ವೃದ್ಧಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭೂಮಿ ಹಸ್ತಾಂತರ ವಿಳಂಬವಾದರೆ ವೆಚ್ಚದ ಅಧಿಕ
ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯು BMRCL ಗೆ ಭೂಮಿ ಹಸ್ತಾಂತರಿಸಿದರೆ ಮೆಟ್ರೋ ಅವಲಂಬಿಸಿರುವ ಅದೇಷ್ಟೋ ನಾಗರಿಕರಿಗೆ ಪರೋಕ್ಷವಾಗಿ ಒಳಿತಾಗಲಿದೆ. ತಡವಾದರೆ ಅದು ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಅದರೊಂದಿಗೆ ಕ್ರಮೇಣ ಯೋಜನೆ ಅನುಷ್ಠಾನ ವಿಳಂಬಗೊಂಡರೆ, ನಿರ್ಮಾಣ ವೆಚ್ಚವು ಅಧಿಕವಾಗುತ್ತಾ ಹೋಗಲಿದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮನವಿಗೆ ನೀವು ಹೆಚ್ಚಿನ ಆದ್ಯತೆ ನೀಡುತ್ತೀರಿ ಎಂದು ಭಾವಿಸಿದ್ದೇನೆ. 45 ಎಕರೆ ಭೂಮಿಯನ್ನು ನಮ್ಮ ಮೆಟ್ರೋಗೆ ಹಸ್ತಾಂತರಿಸಲು ಕೂಡಲೇ ಕ್ರಮ ವಹಿಸಬೇಕು. ಕೂಡಲೇ ಕೆಐಎಡಿಬಿಗೆ ಸೂಚನೆ ನೀಡುವಂತೆ ಎಂದು ಅವರು ಕೇಳಿಕೊಂಡಿದ್ದಾರೆ.












Click it and Unblock the Notifications