ಪ್ರತಿ ತಿಂಗಳು ವರದಿ ಸಲ್ಲಿಸಿ; ಬೆಸ್ಕಾಂಗೆ ಹೈಕೋರ್ಟ್ ನಿರ್ದೇಶನ
ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬೆಂಗಳೂರು, ಫೆಬ್ರವರಿ 13; ಬೆಂಗಳೂರು ನಗರದ ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಬೇಕು ಎಂದು ಬೆಸ್ಕಾಂಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ನಗರದ ಪಾದಚಾರಿ ಮಾರ್ಗಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿರುವ ಕೋರಿ ನಿವೃತ್ತ ವಿಂಗ್ ಕಮಾಂಡ್ ಜಿ. ಬಿ. ಅತ್ರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಬೆಸ್ಕಾಂ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, 2023ರ ಜ.30ರವರೆಗೆ ಪಾದಚಾರಿ ಮಾರ್ಗಗಳ ಮೇಲಿದ್ದ ಒಟ್ಟು 1663 ಟ್ರಾನ್ಸ್ ಫಾರ್ಮರ್‌ಗಳನ್ನು ಸುರಕ್ಷಿತ ಸ್ಥಳ ಸ್ಥಳಾಂತರಿಸಲಾಗಿದೆ ಹಾಗೂ ನ್ಯೂ ಸ್ಪನ್ ಪೋಲ್‌ಗೆ ಬದಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಳಿದ 924 ಟ್ರಾನ್ಸ್‌ಫಾರ್ಮರ್‌ಗಳನ್ನು 2023ರ ಸೆಪ್ಟೆಂಬರ್ ಅಂತ್ಯದೊಳಗೆ ಸ್ಥಳಾಂತರಿಸಲಾಗುವುದು. ಟ್ರಾನ್ಸ್‌ಫಾರ್ಮರ್ ಇರುವ ಜಾಗದಲ್ಲಿ 'ಮೂತ್ರ ವಿರ್ಸಜನೆ ಮಾಡಬಾರದು' ಮತ್ತು 'ಸ್ವಚ್ಛತೆ ಕಾಪಾಡಬೇಕು' ಎಂಬುದಾಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಸೂಚನಾ ಫಲಕ ಅಳವಡಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಟ್ರಾನ್ಸ್‌ಫಾರ್ಮರ್ ಸುತ್ತಲಿನ ಜಾಗವನ್ನು ನಿತ್ಯ ಸ್ವಚ್ಛಗೊಳಿಸುವ ಮೂಲಕ ಕಸ ಮುಕ್ತವಾಗಿಡುವಂತೆ ಬಿಬಿಎಂಪಿಗೆ ನಿರ್ದೇಶಿಸಿರುವುದಾಗಿ ತಿಳಿಸಿದರು.
ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಹೈಕೋರ್ಟ್ ನಿರ್ದೇಶನದಂತೆ ಪಾಲಿಕೆಯ 109ನೇ ವಾರ್ಡ್ ವ್ಯಾಪ್ತಿಗೆ ಬರುವ ರಾಜಾಜಿನಗರದ 3ನೇ ಬ್ಲಾಕಿನ 17ನೇ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಮೇಲಿರುವ ಟ್ರಾನ್ಸ್ ಫಾರ್ಮರ್ ಅನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಆ ಟ್ರಾನ್ಸ್‌ಫಾರ್ಮರ್ ಸುತ್ತಲಿನ ಜಾಗದಲ್ಲಿ ಸಾರ್ವಜನಿಕರು ಬಿಸಾಡಿದ ಕಸ ತೆರವುಗೊಳಿಸಲಾಗಿದೆ. ಈ ಜಾಗದಲ್ಲಿ ಮೂತ್ರ ವಿಸರ್ಜನೆ ಮತ್ತು ವಾಹನ ನಿಲುಗಡೆ ಮಾಡದಿರಲು, ಸ್ವಚ್ಛತೆ ಕಾಪಾಡಲು ಸಾರ್ವಜನಿಕರಿಗೆ ತಿಳಿಸಿ ಸೂಚನಾ ಫಲಕ ಅಳಡಿಸಲಾಗಿದೆ ಎಂದು ಮಾಹಿತಿ ನೀಡಿ ಆ ಕುರಿತ ಫೋಟೋಗಳನ್ನು ಸಲ್ಲಿಸಿದರು.












Click it and Unblock the Notifications