ಬೆಂಗಳೂರು: ಅಥಿತಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ: ಐವರ ವಿರುದ್ಧ ಎಫ್‌ಐಆರ್
ಬೆಂಗಳೂರು, ಸೆಪ್ಟೆಂಬರ್ 20: ಯಾರೋ ಕೆಲ ಶಿಕ್ಷಕರು/ಉಪನ್ಯಾಸಕರು ಮಾಡುವ ನೀಚ ಕೃತ್ಯಗಳಿಂದ ಇನ್ನಿತರರಿಗೂ ಕೆಟ್ಟ ಹೆಸರು. ಇದೀಗ ಅಥಿತಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಐವರು ಅತಿಥಿ ಉಪನ್ಯಾಸಕರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ವಿಶ್ವ ವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಐವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಮ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಉಪನ್ಯಾಸಕರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅತಿಥಿ ಉಪನ್ಯಾಸಕ ರಾಮಾಂಜನೇಯ ಮದ್ಯ ಸೇವನೆ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಶರ್ಟ್ ಬಿಚ್ಚಿ ನೃತ್ಯ ಮಾಡಿದ್ದಾರೆ. ಅಲ್ಲದೆ, ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ವಿದ್ಯಾರ್ಥಿಯನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿರುವುದು ಮತ್ತು ಕಾರಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿರುವ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ.
ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ರಾಮಾಂಜನೇಯ ವಿರುದ್ಧ ಆರೋಪಗಳ ಸರಮಾಲೆಯೇ ಎದುರಾಗಿವೆ. ಇಂಟರ್ನಲ್ ಅಂಕಗಳನ್ನು ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ. ಕಣ್ಣು ಕಾಣದ ನೇತ್ರಾನಂದ ಎಂಬ ಅಂಧ ವಿದ್ಯಾರ್ಥಿಗೆ ಇಂಟರ್ನಲ್ ಕೊಡಲು 1,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನುವ ಆರೋಪ ಕೇಳಿಬಂದಿದೆ. ಇಂತಹ ಘಟನೆಗಳು ಇದೇ ಮೊದಲೇನಲ್ಲ ಈ ಹಿಂದೆಯೂ ಸಹ ನಡೆದಿವೆ.
ಬಿಇಒ ಅಮಾನತು: ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪಗಳು ಎದುರಾಗಿರುವ ಹಿನ್ನೆಲೆ ಬೇಲೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಅವರನ್ನು ಅಮಾನತು ಮಾಡಲಾಗಿದೆ.
ರಾಜೇಗೌಡ ವಿರುದ್ಧದ ಕರ್ತವ್ಯ ಲೋಪ, ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪಗಳು ಮೇಲ್ನೋಟಕ್ಕೆ ಸತ್ಯಕ್ಕೆ ಹತ್ತಿರವಿದೆ. ಈ ಸಂಬಂಧ ಹಾಸನ ಡಿಡಿಪಿಐ ವರದಿ ನೀಡಿದ ಹಿನ್ನೆಲೆ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ಹಾಗೂ ಬಿಇಓ ರಾಜೇಗೌಡ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದ ಕಾರಣ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಶಾಸಕರ ಜೊತೆ ವೇದಿಕೆಯಲ್ಲೇ ಅವರು ವಾಗ್ವಾದಕ್ಕಿಳಿದಿದ್ದರು. ಇನ್ನು ಇದೀಗ ಇಲಾಖಾ ತನಿಖೆ ಕಾಯ್ದಿರಿಸಿ ರಾಜೇಗೌಡರನ್ನು ಅಮಾನತುಗೊಳಿ ಆದೇಶ ಹೊರಡಿಸಲಾಗಿದೆ.












Click it and Unblock the Notifications