Prajwal Revanna Case: ಪ್ರಜ್ವಲ್ ರೇವಣ್ಣ ವಿರುದ್ಧ ಎರಡನೇ ಲುಕ್‌ಔಟ್ ನೋಟಿಸ್
ಬೆಂಗಳೂರು, ಮೇ. 04: ಜೆಡಿಎಸ್ ನಾಯಕ ಮತ್ತು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್‌ಡಿ ರೇವಣ್ಣ ವಿರುದ್ಧ ರಾಜ್ಯದ ಕಾನೂನು ಜಾರಿ ಅಧಿಕಾರಿಗಳು ಎರಡನೇ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಶನಿವಾರ ಹೇಳಿದ್ದಾರೆ.
ಶುಕ್ರವಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಸಂಜೆಯೊಳಗೆ ಇಬ್ಬರೂ ಉತ್ತರ ನೀಡಬೇಕಾಗುತ್ತದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಇದು ಎರಡನೇ ನೋಟಿಸ್ ಆಗಿದೆ.

ಸಂಸದ ಪ್ರಜ್ವಲ್ ರೇವಣ್ಣ ಅವರು ರೆಕಾರ್ಡ್ ಮಾಡಿದ ಅಶ್ಲೀಲ ವೀಡಿಯೊಗಳು ಈಗಾಗಲೇ ಹಾಸನ, ಕರ್ನಾಟಕ ಮತ್ತು ದೇಶಾದ್ಯಂತ ಸದ್ದು ಮಾಡಿದೆ. ಇದಾದ ನಂತರ ವಿದೇಶಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ್ದರು. ಆದರೆ, ಅವರ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.
"ಎಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ಎಚ್.ಡಿ.ರೇವಣ್ಣ ವಿದೇಶಕ್ಕೆ ತೆರಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದೆವು. ಆದರೆ ನಿನ್ನೆ ಎರಡನೇ ನೋಟಿಸ್ ನೀಡಲಾಗಿದೆ. ನೋಟಿಸ್‌ಗಳಿಗೆ ಉತ್ತರಿಸಲು ಅವರಿಗೆ ಇಂದು ಸಂಜೆಯವರೆಗೆ ಸಮಯವಿದೆ" ಎಂದು ಗೃಹ ಸಚಿವ ಜಿ ಪರಮೇಶ್ವರ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ಜಾಮೀನಿಗೆ ಅರ್ಜಿ ಸಲ್ಲಿಸಿದ ರೇವಣ್ಣ
ಮೈಸೂರು ಅಪಹರಣ ಪ್ರಕರಣದಲ್ಲೂ ರೇವಣ್ಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿ ಪರಮೇಶ್ವರ ಹೇಳಿದ್ದಾರೆ. ಮೈಸೂರಿನಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಚ್‌ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದೆ.
ಮೈಸೂರಿನ ಕೆಆರ್ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ತಾಯಿ ಎಚ್‌ಡಿ ರೇವಣ್ಣ ಅವರ ಮನೆಯಲ್ಲಿ ಆರು ವರ್ಷಗಳ ಕಾಲ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದು, ಮತ್ತೆ ತನ್ನ ಗ್ರಾಮಕ್ಕೆ ಮರಳಿದ್ದರು. ಇಲ್ಲಿ ಅವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪ್ರಜ್ವಲ್ ರೇವಣ್ಣ ಎಂಬಾತ ಮಾಡಿರುವ ವಿಡಿಯೋದಲ್ಲಿ ಅವರ ಒಂದು ವಿಡಿಯೋ ಇದೆ. ಇದಾದ ಕೆಲವೇ ದಿನಗಳಲ್ಲಿ ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಹೊಳೆನರಸೀಪುರ ಶಾಸಕ ಮತ್ತು ಅವರ ಸಹಚರರ ವಿರುದ್ಧ ಐಪಿಸಿ ಸೆಕ್ಷನ್ 364ಎ (ಸುಲಿಗೆಗಾಗಿ ಅಪಹರಣ), 365 (ಹಾನಿ ಉಂಟುಮಾಡುವ ಉದ್ದೇಶದಿಂದ ಅಪಹರಣ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಲೈಂಗಿಕ ವೀಡಿಯೊಗಳೊಂದಿಗೆ ಸಂಬಂಧಿಸಿದ ಎರಡನೇ ದೂರಾಗಿದೆ. ಕಳೆದ ತಿಂಗಳು, ಎಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಅವರ ಮನೆಯ ಕೆಲಸದವರು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications