ಖಡಕ್ ಅಧಿಕಾರಿ ಅಲೋಕ್ ಕುಮಾರ್ ಬೆಂಗಳೂರು ಪೊಲೀಸ್ ಕಮೀಷನರ್?
ಬೆಂಗಳೂರು, ಏ. 20: ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮತ್ತೊಮ್ಮೆ ಬೆಂಗಳೂರು ಪೊಲೀಸ್ ಕಮೀಷನರ್ ದಂಡ ಹಿಡಿಯಲಿದ್ದಾರೆಯೇ? ಪೊಲೀಸ್ ವಲಯದಲ್ಲಿ ಇಂತದ್ದೊಂದು ಚರ್ಚೆ ಶುರುವಾಗಿದೆ.
ಹಾಲಿ ಪೊಲೀಸ್ ಕಮೀಷನರ್ ಕಮಲಪಂತ್ ಅವರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಎಂಟು ತಿಂಗಳು ಕಳೆದಿವೆ. ಸಾಮಾನ್ಯವಾಗಿ ಒಂದು ವರ್ಷಕ್ಕೆ ಕಮಲಪಂತ್ ಬದಲಾಗಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ ಹಿನ್ನೆಲೆಯಲ್ಲಿ ಮುಂದುವರೆಸಿದ್ದರು. ಜತೆಗೆ ರಾಜ್ಯ ಸರ್ಕಾರ ಸಿಎಂ ಬದಲಾವಣೆ ಗೊಂದಲದಲ್ಲಿ ಕಮೀಷನರ್ ಬದಲಾವಣೆ ಕಾರ್ಯ ಸ್ಥಗಿತಗೊಂಡಿತ್ತು. ಕೇವಲ ಒಂದು ವರ್ಷದ ಸೇವೆಗೆ ಸೀಮಿತಗೊಳಿಸಿದ್ದ ಕಮೀಷನರ್ ಹುದ್ದೆಯಲ್ಲಿ ಕಮಲಪಂತ್ ಒಂದೂವರೆ ವರ್ಷಕ್ಕಿಂತೂ ಹೆಚ್ಚು ಅವಧಿ ಮುಂದುವರೆದಿದ್ದಾರೆ. ಹೀಗಾಗಿ ಸರ್ಕಾರ ಪೊಲೀಸ್ ಕಮೀಷನರ್ ಬದಲಿಸಲಿದೆ ಎಂಬ ಮಾತು ಸರ್ಕಾರದ ವಲಯದಲ್ಲಿ ಕೇಳಿ ಬಂದಿದೆ.
ಕಮಲಪಂತ್ ಕಮೀಷನರ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕನ್ನಡಿಗರೇ ಅಗಿರುವ ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿ.ದಯಾನಂದ ಅವರು ಕಮಿನಷರ್ ಆಗಲಿದ್ದಾರೆ ಎಂಬ ಮಾತು ಆರು ತಿಂಗಳ ಹಿಂದೆಯೇ ಕೇಳಿ ಬಂದಿತ್ತು. ಮುಂದಿನ ವರ್ಷ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಅಲೋಕ್ ಕುಮಾರ್ ಅವರನ್ನು ಕಮೀನಷರ್ ಹುದ್ದೆಗೆ ನಿಯೋಜಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪೋನ್ ಟಾಪ್ ಆರೋಪದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿಗೆ ಪೊಲೀಸ್ ಆಯುಕ್ತರ ಹುದ್ದೆಯಿಂದ ನಿರ್ಗಮಿಸಿದ್ದ ಅಲೋಕ್ ಕುಮಾರ್ ಕೆಎಸ್ಆರ್‌ಪಿ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದರು. ಮತ್ತೊಬ್ಬ ಪೊಲೀಸ್ ಅಧಿಕಾರಿ ಪೋನ್ ಟ್ಯಾಪ್ ಮಾಡಿಸಿದ ವಿಚಾರ ಸಂಬಂಧ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಿಬಿಐ 'ಬಿ' ವರದಿ ಸಲ್ಲಿಸಿದೆ. ಆರೋಪ ಮುಕ್ತವಾಗುವ ಜತೆಗೆ ಕೆಎಸ್ಆರ್‌ಪಿ ಪಡೆಯಲ್ಲಿ ನಾನಾ ಬದಲಾವಣೆ ತರುವ ಮೂಲಕ ಅಲೋಕ್ ಕುಮಾರ್ ಸುದ್ದಿಯಾಗಿದ್ದರು.

ರಾಜಧಾನಿಯಲ್ಲಿ ಕೋಮು ಸೌಹಾರ್ದ ಕದಡುವ ಘಟನೆಗಳು ಮರುಕಳಿಸುತ್ತಿವೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಾಗಲಿದೆ. ಬೆಂಗಳೂರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಕಡಕ್ ಪೊಲೀಸ್ ಅಧಿಕಾರಿಗೆ ವಹಿಸಬೇಕು. ಈ ನಿಟ್ಟಿನಲ್ಲಿ ಅಲೋಕ್ ಕುಮಾರ್ ಅವರಿಗೆ ಪೊಲೀಸ್ ಆಯುಕ್ತರ ಹುದ್ದೆ ನೀಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಮೇ ತಿಂಗಳಾಂತ್ಯಕ್ಕೆ ಪೊಲೀಸ್ ಆಯುಕ್ತರು ಬದಲಾಗಲಿದ್ದಾರೆ ಎಂದು ಕೇಳಿ ಬರುತ್ತಿದೆ.












Click it and Unblock the Notifications