Self Drive Cars: 'ಸ್ವಯಂಚಾಲಿತ ಕಾರು ಆಟೋ ಮೊಬೈಲ್ ಕ್ಷೇತ್ರದ ಭವಿಷ್ಯ'
ಬೆಂಗಳೂರು, ಫೆಬ್ರವರಿ 13: ಸ್ವಯಂಚಾಲಿತ ಕಾರುಗಳು ಮುಂದಿನ ದಿನಗಳಲ್ಲಿ ಸಂಚಾರ ಕ್ಷೇತ್ರದಲ್ಲಿನ (ವಾಹನೋದ್ಯಮ) ಬಹುದೊಡ್ಡ ತಂತ್ರಜ್ಞಾನವಾಗಲಿದೆ. ಸಾರಿಗೆ ಕ್ಷೇತ್ರದಲ್ಲಿ ವಿಭಿನ್ನ ನಿಯಮಗಳು ಇರುವ ಕಾರಣ ಒಂದಷ್ಟು ಸಮಸ್ಯೆ ಆಗುತ್ತಿದೆ ಎಂದು 'ಮರ್ಸಿಡಿಸ್-ಬೆನ್ಜ್ ಇಂಡಿಯಾ'ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಂತೋಷ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ' ಜಾಗತಿಕ ಹೂಡಿಕೆ ಸಮಾವೇಶ'ದಲ್ಲಿ (GIM 2025) ನಡೆದ 'ವೇಗದ ನಗರೀಕರಣದ ವೇಳೆ ಸಂಚಾರ ಕ್ಷೇತ್ರದ ಭವಿಷ್ಯ' ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ಕಾರುಗಳ ಮೇಲೆ ಶೇಕಡಾ 68 ತೆರಿಗೆ ವಿಧಿಸುತ್ತಿದೆ. ಆದರೆ ಆ ಹಣ ಬೇರೆಡೆ ಬಳಕೆಯಾಗುತ್ತಿರುವುದು ಈ ಕ್ಷೇತ್ರದ ಸಮಸ್ಯೆಗಳು ಉಳಿಯಲು ಕಾರಣವಾಗಿದೆ. ದೇಶದ ಪ್ರತಿ ರಾಜ್ಯದಲ್ಲೂ ಸಾರಿಗೆ-ಸಂಚಾರ ಕ್ಷೇತ್ರಕ್ಕೆ ಸಂಬಂಧಿಸಿ ವಿಭಿನ್ನ ನಿಯಮಗಳು ಜಾರಿಯಲ್ಲಿರುವುದು ಸುಸ್ಥಿರತೆಯನ್ನು ವ್ಯಾಪಕಗೊಳಿಸುವಲ್ಲಿ ವಾಹನ ತಯಾರಕರಿಗೆ ತೊಡಕಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿಗೆ ಬೇರೆ ನಗರಗಳನ್ನು ಜೋಡಿಸಿ
ರಿವರ್ ಮೊಬಿಲಿಟಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಮಣಿ ಮಾತನಾಡಿ, 'ಬೆಂಗಳೂರಿನಲ್ಲಿ ದಟ್ಟಣೆ ತಗ್ಗಿಸುವುದು ಎಷ್ಟು ಮುಖ್ಯವೋ, ಅಕ್ಕಪಕ್ಕದ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವುದೂ ಅಷ್ಟೇ ಮುಖ್ಯ. ಇದು ಅಭಿವೃದ್ಧಿಯನ್ನು ಬೆಂಗಳೂರಿನ ಆಚೆಗೂ ಕೊಂಡೊಯ್ಯಲು ನೆರವಾಗಲಿದೆ. ಅಲ್ಲದೆ, ನಗರದಲ್ಲಿ ವಾಹನಗಳ ಹೊಗೆಯನ್ನೂ ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಸಿಇಇಡಬ್ಲ್ಯು ನಿರ್ದೇಶಕ ಕಾರ್ತಿಕ್ ಗಣೇಶನ್ ಅವರು, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಸಂಚಾರ ಕ್ಷೇತ್ರದಲ್ಲಿ ನಾವೀನ್ಯತೆ ತರುವಾಗ ಎಚ್ಚರ ವಹಿಸಬೇಕು. ಇಲ್ಲವಾದರೆ ಸುಸ್ಥಿರತೆ ಹೆಸರಿನಲ್ಲಿ ಸಾವಿರಾರು ಜನರ ಉದ್ಯೋಗ ಕಸಿಯುವ ಅಪಾಯವಿರುತ್ತದೆ. ಸರ್ಕಾರ ಎಲ್ಲಾ ರೀತಿಯ ವಾಹನಗಳ ಸಂಚಾರದ ಡೇಟಾ ಆಧರಿಸಿ ಮೊಬಿಲಿಟಿ ಕ್ಷೇತ್ರದ ಸುಧಾರಣೆಗೆ ಯೋಜನೆ ರೂಪಿಸಬೇಕು ಎಂದರು.
ವಿಮಾನಯಾನ ಕ್ಷೇತ್ರ ಮುಂದಿದೆ
ಬೋಯಿಂಗ್‌ನ 'ರಾಬರ್ಟ್ ಬಾಯ್ಡ್, ವಿಮಾನಯಾನ ಕ್ಷೇತ್ರ ಹೆಚ್ಚು ಪಾಲುದಾರಿಕೆಯನ್ನು ಬಯಸುತ್ತದೆ. ಏರೋಸ್ಪೇಸ್, ಇಂಧನ, ಹಣಕಾಸು ಮತ್ತು ಸರಕಾರಗಳು ಪಾಲುದಾರಿಕೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಈ ಕ್ಷೇತ್ರ ಹೆಚ್ಚು ಪ್ರಗತಿ ಕಾಣಲು ಸಾಧ್ಯ. ಸುಸ್ಥಿರತೆ ಸಾಧಿಸುವಲ್ಲಿ ಬೇರೆಲ್ಲ ಕ್ಷೇತ್ರಕ್ಕಿಂತ ವಿಮಾನಯಾನ ಕ್ಷೇತ್ರ ಮುಂದಿದೆ ಎಂದು ವಿವರಿಸಿದರು.
ಇದೇ ವೇಳೆ, ಬೆಂಗಳೂರಿನ ಬೋಯಿಂಗ್ ಕೇಂದ್ರದಲ್ಲಿ ಸುಮಾರು 6 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಈ ತಂಡ ವಿಶ್ವದಲ್ಲೇ ಬೋಯಿಂಗ್‌ನ ಅತ್ಯುತ್ತಮ ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.












Click it and Unblock the Notifications