Chinnaswamy Stadium Tragedy: ಬೆಂಗಳೂರಿಗೆ ರಾತ್ರೋರಾತ್ರಿ ಹೊಸ ಪೊಲೀಸ್ ಕಮಿಷನರ್ ನೇಮಕ
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಸಿಎಂ ಸಿದ್ದರಾಮಯ್ಯ ಸಸ್ಪೆಂಡ್ ಮಾಡಿದ್ದಾರೆ. ಇನ್ನು ರಾತ್ರೋರಾತ್ರಿಯೇ ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್ ನೇಮಕವೂ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ಸರ್ಕಾರವು ಬಿ.ದಯಾನಂದ ಅವರ ಸ್ಥಾನಕ್ಕೆ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಬಿಹಾರ ಮೂಲದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಹೊಸ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಆರ್‌ಸಿಬಿ, ಕೆಎಸ್‌ಸಿಎ ಮತ್ತು ಕಾರ್ಯಕ್ರಮದ ಆಯೋಜಕ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸಿಐಡಿ ಇದರ ತನಿಖೆಯ ನೇತೃತ್ವ ವಹಿಸಲಿದ್ದು, ಬೆಂಗಳೂರು ನಗರ ಉಪ ಆಯುಕ್ತ ಜಿ ಜಗದೀಶ ಅವರು ಮ್ಯಾಜಿಸ್ಟೀರಿಯಲ್ ವಿಚಾರಣೆಯ ಭಾಗವಾಗಿ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಆಯುಕ್ತ ಬಿ.ದಯಾನಂದ್ ಅವರಿಗೆ ನೋಟಿಸ್ ನೀಡಲಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್, ಎಸಿಪಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದ್ದು, ಇದರ ಜೊತೆಗೆ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್ಚಾರ್ಜ್ ಅವರನ್ನು ಕೂಡ ತಕ್ಷಣದಿಂದಲೇ ಅಮಾನತು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಕಾಲ್ತುಳಿತ ಘಟನೆಗೆ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಹೊಣೆ ಮಾಡಿದೆ.
ಪೊಲೀಸರನ್ನ ಹರಕೆ ಕುರಿ ಮಾಡಿದ್ದೀರಿ
ಆರ್‌ಸಿಬಿ ಕಾಲ್ತುಳಿತ ದುರಂತದ ಹಿನ್ನೆಲೆ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ, ಬೆಂಗಳೂರು ಪೊಲೀಸ್ ಕಮೀಷನರ್ ಸೇರಿದಂತೆ ಹಲವು ಅಧಿಕಾರಿಗಳು ಸಸ್ಪೆಂಡ್ ಮಾಡಿರುವ ವಿಚಾರಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಮಾನ್ಯ ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕದ ಜನತೆ ನ್ಯಾಯ ಕೇಳುತ್ತಿದ್ದಾರೆ, ಹರಕೆಯ ಕುರಿಗಳನ್ನಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಿಎಂ, ಡಿಸಿಎಂ ರಾಜೀನಾಮೆ ನೀಡಲಿ
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ನಗರ ಪೊಲೀಸ್ ಆಯುಕ್ತರು ಮತ್ತು ಕೆಲ ಪೊಲೀಸ್ ಅಧಿಕಾರಿಗಳನ್ನು ಹೊಣೆದಾರರನ್ನಾಗಿ ಮಾಡಲು ಸರ್ಕಾರ ನಡೆಸುತ್ತಿರುವುದು ಪೂರ್ವನಿಯೋಜಿತ ರಾಜಕೀಯ ನಾಟಕವಾಗಿದೆ. ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲವೆಂದು ಪೊಲೀಸ್ ಇಲಾಖೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರೂ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಒತ್ತಡದಿಂದ ಕಾರ್ಯಕ್ರಮ ನಡೆದದ್ದು ಸ್ಪಷ್ಟ. ಈ ದುರ್ಘಟನೆಗೆ ನೈತಿಕ ಜವಾಬ್ದಾರಿಯನ್ನು ಹೊತ್ತು, ಅವರು ರಾಜೀನಾಮೆ ನೀಡಿ ನ್ಯಾಯಸಮ್ಮತ ತನಿಖೆಗೆ ಒಳಪಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.












Click it and Unblock the Notifications