ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ ಸೆಕ್ಯೂರಿಟಿ ಗಾರ್ಡ್
ಬೆಂಗಳೂರು, ಆ. 26 : ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ ಆರೋಪದಡಿ ಬೆಂಗಳೂರು ಎಚ್‌ಎಎಲ್ ಸಮೀಪದ ಶಾಂತಿನಗರ ಅಪಾರ್ಟ್ ಮೆಂಟ್‌ವೊಂದರ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಲಾಗಿದೆ.
ಖಾಸಗಿ ಸೆಕ್ಯೂರಿಟಿ ಸಂಸ್ಥೆಯ ಗುಲ್‌ಬರುದ್ದೀನ್(22) ಬಂಧಿತ ಆರೋಪಿ. ಕಳೆದ ಎರಡು ತಿಂಗಳಿನಿಂದ ಶಾಂತಿನಗರ ಅಪಾರ್ಟ್ ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳು ಸಂಜೆ ಆಟ ಆಡುತ್ತಿದ್ದಾಗ ಗುಲ್‌ಬರುದ್ದೀನ್ ಬಳಿ ತಮ್ಮ ಫೋಟೊ ತೆಗೆಯುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಗುಲ್‌ಬರುದ್ದೀನ್ ಕೆಲ ಫೋಟೊ ತೆಗೆದಿದ್ದಾನೆ. (ಚಂದಾ ತರಲು ಹೋದ ಬಾಲಕರು ನಾಪತ್ತೆ)

ಕುತೂಹಲಭರಿತರಾದ ಮಕ್ಕಳು ತೆಗೆದ ಫೋಟೊ ತೋರಿಸಲು ದುಂಬಾಲು ಬಿದ್ದಿದ್ದಾರೆ. ಈ ವೇಳೆ ಮಕ್ಕಳಿಗೆ ಗುಲ್‌ಬರುದ್ದೀನ್ ಮೊಬೈಲ್‌ನಲ್ಲಿದ್ದ ಕೆಲ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾನೆ.
ಸೆಕ್ಯೂರಿಟಿ ಗಾರ್ಡ್ ನಡವಳಿಕೆ ಬಗ್ಗೆ ಮಕ್ಕಳು ಪಾಲಕರಲ್ಲಿ ಹೇಳಿದ್ದಾರೆ. ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನನ್ವಯ ಗುಲ್‌ಬರುದ್ದೀನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ಮೂಲದ ಗುಲ್ ಬರುದ್ದೀನ್ ಮೊಬೈಲ್ ಪರಿಶೀಲಿಸಿದಾಗ ಅಶ್ಲೀಲ ಚಿತ್ರಗಳಿರುವುದು ಖಾತ್ರಿಯಾಗಿದ್ದು, ಐಪಿಸಿ 294ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications