ಕೆಂಗೇರಿ ರೈಲು ನಿಲ್ದಾಣ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ಫೆಬ್ರವರಿ 26: ಬೆಂಗಳೂರು ನಗರದ ಕೆಂಗೇರಿ ರೈಲು ನಿಲ್ದಾಣದ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದಿದೆ. ಎರಡನೇ ಪ್ರವೇಶ ದ್ವಾರದ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಮೇ ತಿಂಗಳಿನಲ್ಲಿ ಇದು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದ್ದು, ಪ್ರಯಾಣಿಕರು ರೈಲು ನಿಲ್ದಾಣ ಮತ್ತು ನಮ್ಮ ಮಟ್ರೋ ನಿಲ್ದಾಣಕ್ಕೆ ಸಂಚಾರ ನಡೆಸಲು ಅನುಕೂಲವಾಗಲಿದೆ. ಸುಮಾರು 20 ಕೋಟಿ ರೂ. ವೆಚ್ಚದ ಯೋಜನೆಯ ಕಾಮಗಾರಿ ಅಂತಿಮ ಹಂತವನ್ನು ತಲುಪುತ್ತಿದೆ.
ರೈಲು ಕಾಲೋನಿ ಬದಿಯಿಂದ ನಮ್ಮ ಮೆಟ್ರೋ ಮತ್ತು ರೈಲು ನಿಲ್ದಾಣಗಳ ನಡುವೆ ಸಂಚಾರ ನಡೆಸಿ ಅಪಾಯಕ್ಕೆ ಸಿಲುಕುವ ತೊಂದರೆಯನ್ನು ಈ ಹೊಸ ಪ್ರವೇಶ ದ್ವಾರ ದೂರ ಮಾಡಲಿದೆ. 1.5 ಕಿ. ಮೀ. ದೂರವನ್ನು ಈ ಪ್ರವೇಶದ್ವಾರದ ಮೂಲಕ 500 ಮೀಟರ್‌ನಲ್ಲಿ ತಲುಪಬಹುದಾಗಿದೆ.

ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ಕೆಂಗೇರಿ ನಿಲ್ದಾಣವನ್ನು ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಮೈಸೂರು, ಬೆಂಗಳೂರು ಪ್ರವೇಶ ಮಾಡಲು ಮಾಡಲು ವಾಪಸ್ ಹೋಗಲು ಅನುಕೂಲವಾಗುವಂತೆ 2ನೇ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತಿದೆ.
58 ರೈಲುಗಳ ಸಂಚಾರ: ಕೆಂಗೇರಿ ರೈಲು ನಿಲ್ದಾಣದ ನಗರದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದು. ಸುಮಾರು 20,000 ಪ್ರಯಾಣಿಕರು ಪ್ರತಿದಿನ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ 58 ರೈಲುಗಳು ಸಂಚಾರ ನಡೆಸುತ್ತವೆ ಎಂದು ಅಂದಾಜಿಸಲಾಗಿದೆ.
ಅದರಲ್ಲೂ ಬೆಂಗಳೂರು-ಮೈಸೂರು ನಗರದ ನಡುವೆ ಸಂಚಾರ ನಡೆಸುವ ರೈಲುಗಳು ಕೆಂಗೇರಿ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿವೆ. ಕೆಂಗೇರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣವೂ ಇರುವುದರಿಂದ ಜನರು ರೈಲಿನ ಮೂಲಕ ಆಗಮಿಸಿ ಮೆಟ್ರೋ ರೈಲು ಏರಲು ಸಹ ನಿಲ್ದಾಣ ಅನುಕೂಲವಾಗಿದೆ.
ಎರಡನೇ ಪ್ರವೇಶ ದ್ವಾರ ಲೋಕಾರ್ಪಣೆಗೊಂಡರೆ ನಮ್ಮ ಮೆಟ್ರೋ ಮತ್ತು ರೈಲು ನಿಲ್ದಾಣಗಳ ನಡುವೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಉಪ ನಗರವಲ್ಲದ ರೈಲು ನಿಲ್ದಾಣ ಎಂದು ಕೆಂಗೇರಿಯನ್ನು ಗುರುತಿಸಿದ್ದು, ಈ ಕಾಮಗಾರಿ ಕೈಗೊಳ್ಳಲಾಗಿದೆ. ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1.44 ಲಕ್ಷ ರೂ. ಮೌಲ್ಯದ ಟಿಕೆಟ್ ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೃತ್ ಭಾರತ್ ಯೋಜನೆಯಡಿ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ರೈಲು ನಿಲ್ದಾಣದ ಕಾಮಗಾರಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವರ ವಿ. ಸೋಮಣ್ಣ ಕೆಲವು ದಿನಗಳ ಹಿಂದೆ ಪರಿಶೀಲನೆ ಮಾಡಿದ್ದಾರೆ. ಪ್ರಯಾಣಿಕರು ರೈಲಿಗಾಗಿ ಕಾಯುವ ಸ್ಥಳ, ಬೈಕ್ ಮತ್ತು ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೆಂಗೇರಿ ರೈಲು ನಿಲ್ದಾಣದಲ್ಲಿ ಒದಗಿಸಲಾಗುತ್ತಿದೆ.
ಮೆಟ್ರೋ ಮತ್ತು ರೈಲು ನಿಲ್ದಾಣದ ನಡುವೆ ಕಿರಿದಾರ ರಸ್ತೆ ಇದೆ. ಎರಡನೇ ಪ್ರವೇಶ ದ್ವಾರ ನಿರ್ಮಾಣಗೊಂಡು ಲೋಕಾರ್ಪಣೆಯಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರವೇಶ ದ್ವಾರ ಉದ್ಘಾಟನೆಗಾಗಿ ಪ್ರತಿನಿತ್ಯ ಸಂಚಾರ ನಡೆಸುವ ಜನರು, ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಎಂದು ಜನರು ಹೇಳಿದ್ದಾರೆ.
ಈ 2ನೇ ಪ್ರವೇಶ ದ್ವಾರ ನಿರ್ಮಾಣದಿಂದ ಹೆಚ್ಚಿನ ಲಾಭವಾಗುವುದು ಕೆಂಗೇರಿ ಉಪನಗರ ಕಡೆಯ ಪ್ರಯಾಣಿಕರಿಗೆ. ಈಗ ಮುಖ್ಯ ಪ್ರವೇಶದ ಮೂಲಕ ನಿಲ್ದಾಣವನ್ನು ತಲುಪಲು ಕೆಂಗೇರಿ ಉಪನಗರದ ಸುತ್ತು ಬಳಸಿ ಬರಬೇಕಿದೆ. ಈ ಪ್ರವೇಶ ದ್ವಾರ ಅವರ ಸಮಯ ಉಳಿತಾಯ ಮಾಡುತ್ತದೆ.












Click it and Unblock the Notifications