ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ: ಪೋಷಕರ ಪ್ರತಿಭಟನೆ
ಬೆಂಗಳೂರು, ಜು.17: ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಶಿಕ್ಷಕನೇ ಲೈಂಗಿಕ ದೌರ್ಜನ್ಯ ನಡೆಸಿಯೂ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಶಾಲೆಯ ಆಡಳಿತ ವಿರುದ್ಧ ಪೋಷಕರ ಪ್ರತಿಭಟನೆ ಮುಂದುವರೆದಿದೆ.
ಬುಧವಾರ ಪ್ರತಿಭಟನೆ ನಡೆಸಿಯೂ, ವಿಬ್‌ಗಯಾರ್ ಶಾಲೆಯ ಶಿಕ್ಷಕನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಗುರುವಾರ ನೂರಾರು ಪೋಷಕರು ಶಾಲೆಯ ಬಳಿ ಜಮಾಯಿಸಿ ಕಿಟಕಿ ಗಾಜನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ಪ್ರತಿಭಟನೆಯ ಕಾವು ಹೆಚ್ಚಾದಂತೆ ಪೊಲೀಸರು ಶಾಲೆಯ 30 ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿ ತಂದೆ ವರ್ತೂರು ಠಾಣೆಯಲ್ಲಿ ಈಗಾಗಲೇ ದೂರು ನೀಡಿದ್ದಾರೆ. ದೂರಿನಲ್ಲಿ ಐದು ವರ್ಷದ ಮಗಳು, ತೂಬರಹಳ್ಳಿಯ ವಿಬ್‌ಗಯಾರ್ ಅಂತಾರಾಷ್ಟ್ರೀಯ ಶಾಲೆಯ ಓದುತ್ತಿದ್ದಾಳೆ. ಜು.2ರಂದು ಶಾಲೆಗೆ ಹೋಗಿದ್ದ ಆಕೆ ಮೇಲೆ ಶಾಲೆಯ ಇಬ್ಬರು ಸಿಬ್ಬಂದಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.[ಪೊಲೀಸರಿಗೆ ಯುವತಿ ನೀಡಿದ ದೂರಿನಲ್ಲಿ ಏನಿದೆ?]

ಬುಧವಾರದ ಪ್ರತಿಭಟನೆಯ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಅಭಿಷೇಕ್ ಗೋಯಲ್, ಮಾಜಿ ಶಾಸಕ ನಂದೀಶ್ ರೆಡ್ಡಿ ಆರೋಪಿಗಳನ್ನು ಶೀಘ್ರ ಬಂಧಿಸಿ ಶಿಕ್ಷೆಗೆ ಒಳಪಡಿಸುವುದಾಗಿ ಭರವಸೆ ನೀಡಿದರು.[ಅತ್ಯಾಚಾರ ಪ್ರಕರಣ : ಯಾರು, ಏನು ಹೇಳಿದರು?]
ಮುಗ್ಧ ಬಾಲಕಿ ತೋರಿಸಿರುವ ಕೊಠಡಿಯಲ್ಲಿ ಸಿಸಿಕ್ಯಾಮೆರಾ ಇಲ್ಲದಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಸಿಸಿಕ್ಯಾಮೆರಾ ಇಲ್ಲದ ಕೋಣೆ ಅಲ್ಲಿನ ಸಿಬ್ಬಂದಿಗೆ ಮಾತ್ರ ತಿಳಿದಿರುತ್ತದೆ ಎಂಬುದು ಪೋಷಕರ ಆರೋಪ. ಸಿಸಿಕ್ಯಾಮೆರಾ ಇಲ್ಲದ ಕಾರಣ ತನಿಖೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಪೊಲೀಸರಿಗೆ ಸಹಕಾರ ನೀಡುತ್ತೇವೆ: ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ. ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿಲ್ಲ. ಸಿಸಿ. ಕ್ಯಾಮೆರಾಗಳ ಎಲ್ಲಾ ದೃಶ್ಯಗಳನ್ನು ಪೊಲೀಸರಿಗೆ ನೀಡುತ್ತೇವೆ. ಆರೋಪ ಸಾಬೀತಾದರೆ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಲೆಯ ಮುಖ್ಯಸ್ಥ ರುಸ್ತುಂ ಕೇರವಾಲ ಹೇಳಿದ್ದಾರೆ.
ಶಾಲೆಗೆ ಮಕ್ಕಳನ್ನು ಕಳಿಸಲ್ಲ: ಶಾಲೆಯ ಆಡಳಿತ ಮಂಡಳಿಯ ಬೇಜವಾಬ್ದಾರಿ ವರ್ತನೆಯಿಂದ ರೊಚ್ಚಿಗೆದ್ದಿರುವ ಪೋಷಕರು ಜು.22ವರೆಗೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications