ಜನವರಿ 31 ರಂದು ಶಶಿಕಲಾ ನಟರಾಜನ್ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು,ಜನವರಿ 30: ಕಳೆದ 10 ದಿನಗಳಿಂದ ಎಐಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನವರಿ 31 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ಶಶಿಕಲಾ ಅವರು 10 ದಿನಗಳ ಚಿಕಿತ್ಸೆಯನ್ನು ಪೂರೈಸಿದ್ದಾರೆ. ಆರೋಗ್ಯ ಸುಧಾರಿಸಿದೆ. ಜನವರಿ 31 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು, ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಶಿಕಲಾ ಅವರು ಶನಿವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದಾಗಿ ಭಾನುವಾರ ಬಿಡುಗಡೆಯಾಗಲಿದ್ದಾರೆಂದು ಹೇಳಲಾಗಿದೆ.

ಈಗಾಗಲೇ ಶಶಿಕಲಾ ಅವರಿಗೆ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ವೈದ್ಯಕೀಯ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದರೆ ಮಾತ್ರ ಶಶಿಕಲಾ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಈ ನಡುವೆ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯು ಶಶಿಕಲಾ ಅವರ ಆರೋಗ್ಯ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶಶಿಕಲಾ ಅವರು ಲಕ್ಷಣರಹಿತರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದೆ.
ಆಕ್ಸಿಜನ್ ಸಪೋರ್ಟ್ ಇಲ್ಲದೆಯೇ ಶಶಿಕಲಾ ಅವರು ಸಾಮಾನ್ಯರಂತೆ ಉಸಿರಾಡುತ್ತಿದ್ದು, ಮಧುಮೇಹ ನಿಯಂತ್ರಣದಲ್ಲಿದೆ. ಪ್ರಜ್ಞಾ ಸ್ಥಿತಿಯಲ್ಲಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿ ಎಂದು ತಿಳಿಸಿದೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೇರವಾಗಿ ಜನರನ್ನು ಭೇಟಿ ಮಾಡದೆ ಶಶಿಕಲಾ ಅವರು, ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಳ್ಳುವ ಸಲುವಾಗಿ ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇ ಆದರೆ, ಶಶಿಕಲಾ ಅವರು ನೇರವಾಗಿ ಚೆನ್ನೈಗೆ ತೆರಳುತ್ತಾರೋ ಅಥವಾ ಬೇರೆ ನಗರಕ್ಕೆ ಭೇಟಿ ನೀಡುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.











Click it and Unblock the Notifications