ಲಾಡ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ : ರಾಜ್ಯಪಾಲರು
ಬೆಂಗಳೂರು, ನ. 21 : ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ನನಗೆ ಅನೇಕ ದೂರುಗಳು ಬಂದಿವೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದ್ದಾರೆ. ನನಗೆ ಬಂದ ದೂರುಗಳನ್ನು ಸಿಎಂ ಸಿದ್ದರಾಮುಯ್ಯ ಅವರಿಗೆ ಕಳುಹಿಸಿದ್ದೇನೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಚಿವ ಸಂತೋಷ್ ಲಾಡ್ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂಬ ಒತ್ತಡ ಕೇಳಿಬರುತ್ತಿದೆ, ಈ ಬಗ್ಗೆ ನನಗೆ ಬಂದಿರುವ ದಾಖಲೆಗಳನ್ನು ಪರಿಶೀಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದೇನೆ ಎಂದು ಹೇಳಿದರು.

ಸಂತೋಷ್ ಲಾಡ್ ರಾಜೀನಾಮೆಗೆ ಒತ್ತಾಯಿಸಿ ನನಗೆ ಬಂದ ದೂರು, ದಾಖಲೆಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದೇನೆ. ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವ ಕುರಿತು ಅವರಿಂದ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳುವ ಮೂಲಕ ಸದಾ ಸಂತೋಷ್ ಲಾಡ್ ಸಮರ್ಥಿಸಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. (ಲಾಡ್ ಸಮರ್ಥಿಸಿಕೊಂಡ ಸಿದ್ದರಾಮಯ್ಯ)
ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಸಂತೋಷ್ ಲಾಡ್ ಕುರಿತಾದ 126 ಪುಟಗಳ ದಾಖಲೆಗಳನ್ನು ನೀಡಿ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಸಿಎಂ ಅವರಿಗೆ ಸೂಚಿಸಬೇಕು ಎಂದು ಕೆಲವು ದಿನಗಳ ಹಿಂದೆ ಮನವಿ ಮಾಡಿದ್ದರು. ಬಿಜೆಪಿ ಸಹ ಲಾಡ್ ಲಡಾಯಿಯನ್ನು ರಾಜಭವನಕ್ಕೆ ತೆಗೆದುಕೊಂಡು ಹೋಗಿತ್ತು. (ಸಂತೋಷ್ ಲಾಡ್ ರಾಜೀನಾಮೆ ರಾಜಭವನದ ಅಂಗಳಕ್ಕೆ)
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸಂತೋಷ್ ಲಾಡ್ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಲಾಡ್ ವಿರುದ್ಧದ ದೂರುಗಳನ್ನು ಸಿಎಂಗೆ ಕಳುಹಿಸಿರುವ ರಾಜ್ಯಾಪಾಲರು ಅವರ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿದುಬಂದಿದೆ. (ಲಾಡ್ ವಿಚಾರ, ಸಿಎಂ ವಿರುದ್ಧ ಕೇಸು ಹಾಕ್ತಾರಂತೆ)












Click it and Unblock the Notifications