Vinod Raj: ನಟ ವಿನೋದ್ ರಾಜ್ ದಿಢೀರ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ಜೂನ್ 12: ಕನ್ನಡ ಚಿತ್ರರಂಗದ ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ನಟಿ ಲೀಲಾವತಿ ಪುತ್ರ, ನಟ ವಿನೋದ್ ರಾಜ್ ತಾಯಿ ಅಗಲಿಕೆ ನಂತರ ಏಕಾಂಗಿಯಾಗಿ ವಾಸವಿದ್ದರು. ಇದೀಗ ವಿನೋದ್ ರಾಜ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ನಟ ವಿನೋದ್ ರಾಜ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನೆಲಮಂಗಲದಲ್ಲಿರುವ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ವಿನೋದ್ ರಾಜ್ ಅವರಿಗೆ ಸದ್ಯ ಆಪರೇಷನ್ ಮಾಡಲಾಗಿದೆ ಎಂದು ಮೂಲಗಳ ಮಾಹಿತಿ ಪ್ರಕಾರ ತಿಳಿದುಬಂದಿದೆ. ವಿನೋದ್ ರಾಜ್ ಅವರಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ನಟನ ಆರೋಗ್ಯದ ಬಗ್ಗೆ ಇನ್ನುಷ್ಟು ಮಾಹಿತಿ ವೈದ್ಯರಿಂದ ತಿಳಿದು ಬರಬೇಕಿದೆ.

ಸುಡು ಬಿಸಿಲಿನಲ್ಲೇ ನಿಂತು ರಸ್ತೆ ಸರಿಪಡಿಸಿದ್ದ ವಿನೋದ್ ರಾಜ್
ಸಮಾಜಮುಖಿ ಕಾರ್ಯ ಹಾಗೂ ದಾನ- ಧರ್ಮಗಳಲ್ಲಿ ಸದಾ ಮುಂದಿರುವ ವಿನೋದ್ ರಾಜ್ ಅವರು ಇತ್ತೀಚಿಗೆ ಸುಡು ಬಿಸಿಲಿನಲ್ಲೇ ನಿಂತು ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು. ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿಸಿದ್ದರು. ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್ ರಾಜ್ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು.
ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ಗುಂಡಿ ಬಿದ್ದ ರಸ್ತೆ ಹಾಗೂ ಕೆಟ್ಟು ಹೋದ ರಸ್ತೆಗಳನ್ನು ಸರಿ ಪಡಿಸಿದ್ದರು. ಈ ಮೂಲಕ ಮಳೆಗಾಲ ಆರಂಭವಾಗುವ ಮೊದಲೇ ವಿನೋದ್ ರಾಜ್ ರಸ್ತೆಯನ್ನು ರಿಪೇರಿ ಮಾಡಿಸಿದ್ದರು. ಒಮ್ಮೆ ಮಳೆಗಾಲ ಆರಂಭವಾಗಿ ಜೋರಾಗಿ ಮಳೆ ಶುರುವಾದರೆ, ರಸ್ತೆಗಳು ಮತ್ತಷ್ಟು ಕೆಟ್ಟು ಹೋಗಲಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ಅಲ್ಲದೇ ರಸ್ತೆಗಳು ಕೆಸರು ಮಯವಾಗುತ್ತದೆ. ಇದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿನೋದ್ ರಾಜ್ ಈ ಸುಡು ಬಿಸಿಲಿನ ಮಧ್ಯೆಯೂ ರಸ್ತೆಯಲ್ಲಿ ನಿಂತು ತಾವೇ ಸ್ವತಃ ರಸ್ತೆಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ಮಾಡಿಸಿದ್ದರು. ಲೀಲಮ್ಮನ ಪುತ್ರನ ಸಮಾಜಮುಖಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.












Click it and Unblock the Notifications