SM Krishna: ಇಂದು ಸ್ವಗ್ರಾಮದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ: ಮಧ್ಯಾಹ್ನ 3ಕ್ಕೆ ಅಂತ್ರಿಕ್ರಿಯೆ
ಬೆಂಗಳೂರು, ಡಿಸೆಂಬರ್ 11: ವಯೋಸಹಜ ಕಾಯಿಲೆಯಿಂದಾಗಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತಿಮ ಕ್ರಿಯೆಯು ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಇಂದು (ಡಿ.11) ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ. ಬೆಂಗಳೂರಿನಲ್ಲಿ ಮಂಗಳವಾರದಿಂದ ಅಂತಿಮ ದರ್ಶನಕ್ಕೆ ಇಟ್ಟಿದ್ದ ಎಸ್‌ಎಂಕೆ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಯಾವ ಮಾರ್ಗಗಗಳಲ್ಲಿ ಮೆರವಣಿಗೆ ಸಾಗಲಿದೆ? ಸಮಯ?ದ ವಿವರ ಇಲ್ಲಿದೆ.
92 ವರ್ಷದ ಎಸ್.ಎಂ.ಕೃಷ್ಣ ಅವರು ಮಂಗಳವಾರ ಬೆಳಗಿನ ಜಾವ ನಿಧನರಾದರು. ಇಂದು ಬುಧವಾರ ಬೆಳಗ್ಗೆ 8.30 ಗಂಟೆವರೆಗೂ ಸದಾಶಿವನಗರದ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 8.30 ಗಂಟೆ ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಸ್ವಗ್ರಾಮಕ್ಕೆ ವಾಹನದ ಮೂಲಕ ಒಯ್ಯಲು ವ್ಯವಸ್ಥೆ ಮಾಡಲಾಗಿದೆ.

ಪಾರ್ಥಿವ ಶರೀರವನ್ನು ಸದಾಶಿವನಗರದಿಂದ ಟೌನ್ ಹಾಲ್, ಕೆಜಿ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತ ಅಲ್ಲಿಂದ ಮೈಸೂರು ರಸ್ತೆ ಮೂಲಕ ಕೆಂಗೇರಿ, ಬಿಡದಿ, ರಾಮನಗರದಿಂದ ಮದ್ದೂರಿನ ಅವರ ಸ್ವಗ್ರಾಮ ಸೋಮನಹಳ್ಳಿಗೆ ಬೆಳಗ್ಗೆ 10.30ಕ್ಕೆ ತಲುಪುತ್ತಿದ್ದಂತೆ ಅಲ್ಲಿ ಸಹ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸ್ವಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಎಲ್ಲ ವಿಧದ ಸಿದ್ಧತೆ ಮಾಡಿಕೊಂಡಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಮಧ್ಯಾಹ್ನ 3ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಹಾಗೂ ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಮಾಜಿ ಮುಖ್ಯಮಂತ್ರಿ ಎಸ್‌ಎಂ.ಕೃಷ್ಣರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ಸದಾಶಿನಗರದ ಅವರ ನಿವಾಸಕ್ಕೆ ರಾಜಕಾರಣಿಗಳು, ಸಿನಿಮಾ ನಟರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಗಣ್ಯಾತಿಗಣ್ಯರು ಎಸ್‌ಎಂಕೆ ನಿವಾಸಕ್ಕೆ ಭೇಟಿ: ಶ್ರದ್ಧಾಂಜಲಿ ಅರ್ಪಣೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದಗೌಡ, ಸಂಸದ ಡಾ. ಸಿ.ಎನ್.ಮಂಜುನಾಥ, ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ತನ್ವೀರ್ ಸೇಠ್, ಮಾಜಿ ಸಚಿವರಾದ ನಫೀಜಾ ಫಜಲ್, ಎಂ.ಟಿ.ಬಿ.ನಾಗರಾಜ್, ಅರವಿಂದ ಲಿಂಬಾವಳಿ, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಮಾಜಿ ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಅವಧೂತ ವಿನಯ್ ಗುರೂಜಿ, ಭಾನುಪ್ರಕಾಶ್ ಶರ್ಮಾ, ತೇಜಸ್ವಿನಿ ಅನಂತಕುಮಾರ್, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಚಿತ್ರರಂಗದಿಂದ ನಟಿ ರಮ್ಯಾ, ಅಶ್ವಿನಿ ಪುನೀತ್ ರಾಜಕುಮಾರ್, ನಟ ಶ್ರೀನಾಥ, ನಟಿ ತಾರಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬಿಜೆಪಿ ನಾಯಕರು, ಶಾಸಕರು, ಸಚಿವರ ಸೇರಿದಂತೆ ಅನೇಕ ಗಣ್ಯರು, ಸಿನಿಮಾ ಕಲಾವಿದರು ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. ಗಣ್ಯರು ಎಸ್‌ಎಂಕೆ ಅವರೊಂದಿಗಿನ ಒಡನಾಟ, ಹಳೆಯ ನೆನಪುಗಳನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಸೋಮನಹಳ್ಳಿಯಲ್ಲೂ ಇಂದು ಮಧ್ಯಾಹ್ನವರೆಗೆ ಭಾಗದ ನಾಯಕರು, ಜನರು, ಎಸ್‌ಎಂ ಕೃಷ್ಣ ಆಪ್ತರು, ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆಯಲಿದ್ದಾರೆ. ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.












Click it and Unblock the Notifications