EV Hub: ಬೆಂಗಳೂರು ಬಳಿ 'ಎನ್‌ಶ್ಯೂರ್' ಬ್ಯಾಟರಿ ಉತ್ಪಾದನಾ ಘಟಕ ಆರಂಭ
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದೆ. ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ ಎಂದು ಎನ್‌ಶ್ಯೂರ್ ನ ಸ್ಥಾಪಕ ಮತ್ತು ಸಿಇಒ ಚಂದ್ರಕಾಂತ್ ರಾಮಲಿಂಗಂ ಮಾಹಿತಿ ನೀಡಿದ್ದಾರೆ.
ರಾಜಧಾನಿಯಲ್ಲಿ ಬಳಿ ನಿರ್ಮಾಣವಾಗುವ ಈ ಘಟಕಕ್ಕಾಗಿ 1,050 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಒಟ್ಟು 80 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ, ಇವಿ ಹಬ್ ಆಗಲಿರುವ ಮಾಲೂರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದರು.

ಈ ಘಟಕವು ಎಲ್‌ಇಪಿ ಸೆಲ್‌ಗಳ 1.0 GWh ಸಾಮರ್ಥ್ಯ ಹೊಂದಿದೆ. ಮುಂದಿನ ಹಂತದಲ್ಲಿ ಈ ಗಿಗಾಫ್ಯಾಕ್ಟರಿಯನ್ನು 5 GWh ಅಥವಾ ಇದಕ್ಕೂ ಹೆಚ್ಚು ಸಾಮರ್ಥ್ಯಕ್ಕೆ ವಿಸ್ತರಿಸುವ ಅವಕಾಶವೂ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪರಿಸರವಾದಿಗಳು ಉತ್ತೇಜನ ನೀಡುತ್ತಿದ್ದರೂ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ.
ಬ್ಯಾಟರಿ ದೀರ್ಘಾವಧಿ ಬಗ್ಗೆ ಜನರಲ್ಲಿ ಅನುಮಾನ
ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಶಕ್ತಿ, ದೀರ್ಘಾವಧಿಯ ಬಾಳಿಕೆ ಹಾಗೂ ಸುರಕ್ಷತೆ ಕುರಿತು ಜನಸಾಮಾನ್ಯರಲ್ಲಿ ಇನ್ನೂ ಅನುಮಾನ ಇದೆ. ಇದಕ್ಕೆ ಪರಿಹಾರವಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹಾಗೂ ಸುರಕ್ಷಿತವಾದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಎನ್‌ಶ್ಯೂರ್ ಪರಿಚಯಿಸಲು ಮುಂದಾಗಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವಾರು ರೀತಿಯಲ್ಲಿ ಬಳಸಬಹುದು ಎಂದು ಅವರು ಘಟಕ ಮತ್ತು ಇವಿ ಬಳಕೆ ಕುರಿತು ವಿವರಿಸಿದರು.
ರಾಜ್ಯ ಉನ್ನತ ಮಟ್ಟದಲ್ಲಿ ಯೋಜನೆಗಳಿಗೆ ಅನುಮೋದನೆ ಪಡೆಯುವಲ್ಲಿ ನಾವು (ಎನ್‌ಶ್ಯೂರ್) ಮುಂದಿದ್ದೇವೆ. ಎನ್‌ಶ್ಯೂರ್ ನ ಪೂರ್ಣ ಪ್ರಮಾಣದ ಲಿ-ಅಯಾನ್ ಸೆಲ್ ಉತ್ಪಾದನಾ ಪ್ರಾಯೋಗಿಕ ಘಟಕವು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಕಾರ್ಯಾರಂಭಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದೆ ಜತೆ ಎನ್‌ಶ್ಯೂರ್ ಒಪ್ಪಂದ
ಎನ್‌ಶ್ಯೂರ್ ದೇಶೀಯವಾಗಿ ಉತ್ಪಾದನೆಗೆ ಕೇಂದ್ರ ಸರ್ಕಾರ ಜತೆ ಒಪ್ಪಂದ ಮಾಡಿಕೊಂಡಿದೆ. ಎನ್‌ಶ್ಯೂರ್ ಕಂಪನಿಯು ಎನ್‌ಎಂಸಿ ಮತ್ತಿತರ ಕೆಮಿಸ್ಟ್ರಿಗಳ ಬದಲು, ಎಲ್‌ಇಪಿ ಕೆಮಿಸ್ಟ್ರಿಯನ್ನು ತನ್ನ ತಂತ್ರಜ್ಞಾನಕ್ಕಾಗಿ ಆಯ್ಕೆ ಮಾಡಿಕೊಂಡಿದೆ. ಇದು ಹೆಚ್ಚು ಉಷ್ಣ ಸ್ಥಿರತೆಯನ್ನು ನೀಡುತ್ತದೆ. ಜೊತೆಗೆ ಹೆಚ್ಚು ಸುರಕ್ಷತೆ, ದೀರ್ಘ ಬಾಳಿಕೆ, ಕೈಗೆಟುಕುವ ದರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿದೆ ಎಂದರು.
ನಮ್ಮ ಉತ್ಪನ್ನದ ಸೆಲ್‌ಗಳು ನಿಕಲ್ ಅಥವಾ ಕೋಬಾಲ್ಟ್‌ನಂತಹ ಅಪರೂಪದ ಲೋಹಗಳನ್ನು ಹೊಂದಿಲ್ಲ. ಇದು ಅಗ್ನಿ ಅವಘಡದ ಅನಾಹುತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ವಿವಿಧ ರೀತಿಯ ಬಳಕೆಗೆ ಆಗುವಂತೆ ಲಿ-ಅಯಾನ್ ಸೆಲ್‌ಗಳನ್ನು ತಯಾರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications