RR ನಗರ ಉಪಚುನಾವಣೆ: ಬರೆದಿಟ್ಟುಕೊಳ್ಳಿ, ರಾಹುಲ್ ಗಾಂಧಿ ಸ್ಪರ್ಧಿಸಿದರೂ ಗೆಲುವು ಬಿಜೆಪಿಯದ್ದೇ
ಬೆಂಗಳೂರು, ಸೆ 30: ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾ ಅಸೆಂಬ್ಲಿಯ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ, ರಾಜ್ಯ ರಾಜಕೀಯ ಗರಿಗೆದಲಾರಂಭಿಸಿದೆ. ಮೂರೂ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ನಿರತವಾಗಿದೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಆರ್ ಆರ್ ನಗರ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿನ ವಿಚಾರದಲ್ಲಿ ಸಂಪೂರ್ಣ ವಿಶ್ವಾಸದಲ್ಲಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಗೆಲುವು ನಮ್ಮದೇ ಎಂದು ಹೇಳಿದ್ದಾರೆ.
ಬಿಬಿಎಂಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು, "ಬರೆದಿಟ್ಟುಕೊಳ್ಳಿ, ಒಂದು ವೇಳೆ ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು ಇಲ್ಲಿಂದ ಸ್ಪರ್ಧಿಸಿದರೂ, ಗೆಲುವು ಬಿಜೆಪಿಯದ್ದೇ"ಎಂದು ಹೇಳಿದ್ದಾರೆ.

"ಕೆಪಿಸಿಸಿ ಅಧ್ಯಕ್ಷರು ಏನೇ ತಂತ್ರಗಾರಿಕೆ ನಡೆಸಲಿ, ಅದನ್ನು ಎದುರಿಸುವ ರಿವರ್ಸ್ ತಂತ್ರಗಾರಿಕೆ ನಮಗೂ ತಿಳಿದಿದೆ" ಎನ್ನುವ ಖಚಿತ ವಿಶ್ವಾಸದ ಮಾತನ್ನಾಡಿರುವ ಸೋಮಶೇಖರ್, "ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ"ಎಂದು ಹೇಳಿದ್ದಾರೆ.
"ನಮ್ಮ ಜೊತೆ ಮುನಿರತ್ನ ಅವರು ಕೂಡಾ ರಾಜೀನಾಮೆ ನೀಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ"ಎಂದು ಸೋಮಶೇಖರ್ ಹೇಳಿದ್ದಾರೆ.
"ಮುನಿರತ್ನ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಅವರಿಗೇ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೇವೆ"ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.












Click it and Unblock the Notifications