Caste Certificate Row: "ಜಾತಿ ಪ್ರಮಾಣಪತ್ರದ ಸಮಸ್ಯೆಯಲ್ಲ... ಕಾಂಗ್ರೆಸ್ ಸರ್ಕಾರ ಸತ್ತಿರುವುದರ ಪ್ರಮಾಣ ಪತ್ರ!"
Caste Certificate Row: ಜಾತಿ, ನಿವಾಸಿ ಪ್ರಮಾಣಪತ್ರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಪರಿಚಯಿಸಿರುವುದಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಹೇಳಿದೆ. ಕಚೇರಿ ಅಲೆದಾಟ ತಪ್ಪಿತು; ಜಾತಿ, ನಿವಾಸಿ ಪ್ರಮಾಣಪತ್ರ ಮನೆ ಬಾಗಿಲಿಗೆ ಬಂತು. ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಿಸುವ ಸೇವೆಗೆ ಕರ್ನಾಟಕ ಸರ್ಕಾರವು ಚಾಲನೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ. ಇದು ಜಾತಿ ಪ್ರಮಾಣಪತ್ರದ ಸಮಸ್ಯೆಯಲ್ಲ... ಕಾಂಗ್ರೆಸ್ ಸರ್ಕಾರ ಸತ್ತಿರುವುದರ ಪ್ರಮಾಣ ಪತ್ರ! ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಬಡ ಕುಟುಂಬಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ತಹಸೀಲ್ದಾರ್ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ತಿಂಗಳುಗಳು ಕಳೆದರೂ ಪ್ರಮಾಣಪತ್ರ ಸಿಗುತ್ತಿಲ್ಲ. ಸರ್ಕಾರ ಮಾತ್ರ ವಿದ್ಯಾರ್ಥಿಗಳ, ಉದ್ಯೋಗಾಕಾಂಕ್ಷಿಗಳ ಸಮಸ್ಯೆಗೆ ಕ್ಯಾರೆ ಎನ್ನುತ್ತಿಲ್ಲ. ಸರ್ಕಾರಿ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರವೇಶ, ವಿದ್ಯಾರ್ಥಿವೇತನ ಮತ್ತು ಮೀಸಲಾತಿಯ ಅವಕಾಶಗಳು ಕೈತಪ್ಪುತ್ತಿವೆ. ಒಂದು ಪ್ರಮಾಣಪತ್ರ ಕೊಡಲೂ ಸಾಧ್ಯವಾಗದ ಸರ್ಕಾರ, ರಾಜ್ಯದ ಆಡಳಿತ ನಡೆಸುತ್ತಿದೆ ಎಂದು ಹೇಳಿಕೊಳ್ಳುವುದೇ ಹಾಸ್ಯಾಸ್ಪದ!

ರೈತರಿಗೆ ಗೊಬ್ಬರ ಇಲ್ಲ, ಜನರಿಗೆ ವಿದ್ಯುತ್ ಇಲ್ಲ, ಈಗ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವೂ ಇಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಇಲಾಖೆಯನ್ನು ನೋಡಿದರೂ ನಿಷ್ಕ್ರಿಯತೆ, ವಿಳಂಬ ಮತ್ತು ಬೇಜವಾಬ್ದಾರಿತನವೇ ಕಾಣುತ್ತಿದೆ. ಸರ್ಕಾರ ನಡೆಸುವುದಕ್ಕಿಂತ ಅಧಿಕಾರ, ಲೂಟಿ ಭ್ರಷ್ಟಾಚಾರವೇ ಮುಖ್ಯ ಎಂಬ ಮನೋಭಾವದ ಪರಿಣಾಮವೇ ಇಂದು ಪ್ರತಿಯೊಬ್ಬ ಕನ್ನಡಿಗ ಅನುಭವಿಸುತ್ತಿರುವ ಆಡಳಿತದ ದಿವಾಳಿತನ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಸರ್ಕಾರಕ್ಕೆ ಒಂದು ಜಾತಿ ಪ್ರಮಾಣಪತ್ರವನ್ನು ಸಕಾಲಕ್ಕೆ ನೀಡುವ ಸಾಮರ್ಥ್ಯವಿಲ್ಲದಿದ್ದರೆ, 7 ಕೋಟಿ ಕನ್ನಡಿಗರ ಆಡಳಿತವನ್ನು ಹೇಗೆ ನಡೆಸುತ್ತೀರಿ?
ಇದು ಕೇವಲ ಕಂದಾಯ ಇಲಾಖೆಯ ವೈಫಲ್ಯವಲ್ಲ; ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಆಡಳಿತ ವ್ಯವಸ್ಥೆಯ ಕುಸಿತ. ಯುವಜನರ ಭವಿಷ್ಯದ ಜೊತೆ ಚೆಲ್ಲಾಟವನ್ನು ತಕ್ಷಣ ನಿಲ್ಲಿಸಿ, ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಯುದ್ಧೋಪಾದಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಯುವಜನರ ಧ್ವನಿಯಾಗಿ ಬಿಜೆಪಿ ಬೀದಿಗಿಳಿಯಲಿದೆ ಎಂದೂ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗೂ ಸರ್ಕಾರದಿಂದ ಕತ್ತರಿ: ಆರ್.ಅಶೋಕ್ ಆಕ್ರೋಶ
ಗ್ಯಾರಂಟಿ ಯೋಜನೆಗೂ ಸರ್ಕಾರದಿಂದ ಕತ್ತರಿ ಹಾಕಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ... ಈಗ ಗೃಹಲಕ್ಷ್ಮಿಗೆ ಗ್ಯಾರಂಟಿ ಇಲ್ಲವೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಮಹಿಳೆಯರಿಗೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ ಎಂಬ ಪ್ರಶ್ನೆ ಇಂದು ರಾಜ್ಯದ ಜನರಲ್ಲಿದೆ. ಗೃಹಜ್ಯೋತಿ ಯೋಜನೆಯಲ್ಲಿ ಪರಿಷ್ಕರಣೆ ಮಾಡಿ ಲಕ್ಷಾಂತರ ಕುಟುಂಬಗಳ ಮೇಲೆ ಹೆಚ್ಚುವರಿ ಹೊರೆ ಹಾಕಿದ ಸರ್ಕಾರ, ಈಗ ಗೃಹಲಕ್ಷ್ಮಿ ಯೋಜನೆಯ ಮೇಲೂ ಸರ್ಕಾರದ ಕರಿ ಛಾಯೆ ಕಾಣುತ್ತಿದೆ. ಮಹಿಳೆಯರ ವಿಶ್ವಾಸದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಅದೇ ಮಹಿಳೆಯರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ.
ಡಿ.ಕೆ ಶಿವಕುಮಾರ್ ಅವರೇ, ಮಹಿಳೆಯರ ಬದುಕಿನೊಂದಿಗೆ ರಾಜಕೀಯ ಮಾಡುವುದು ನಿಲ್ಲಿಸಿ. ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳಿಗೆ ಗ್ಯಾರಂಟಿ ನೀಡಿ. ರಾಜ್ಯದ ಲಕ್ಷಾಂತರ ಗೃಹಲಕ್ಷ್ಮಿಯರಿಗೆ ಸ್ಪಷ್ಟ ಉತ್ತರ ನೀಡಿ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications
