ನಮ್ಮ ಲೇಔಟಿಗೂ ಪ್ರಧಾನಿ ಮೋದಿ ಬರ್ಲಪ್ಪ!
ಬೆಂಗಳೂರು, ಸೆ.23: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಕರ್ನಾಟಕ ಬಿಜೆಪಿ ಸಕತ್ ಸಂಭ್ರಮದಿಂದ ಸ್ವಾಗತಕ್ಕೆ ಸಜ್ಜಾಯಿತು. ಇದರ ಬೆನ್ನಲ್ಲೇ ಬಿಜೆಪಿಯಿಂದ ಮೇಯರ್ ಆಗಿರುವ ಶಾಂತಕುಮಾರಿ ಅವರಿಗೆ ಸಕತ್ ಜವಾಬ್ದಾರಿ ತಲೆ ಮೇಲೆ ಬಿತ್ತು. ರಾತ್ರಿ ಕಳೆದು ಬೆಳಗಾಗುವುದರೊಳಗೆ ಮೋದಿ ಸಂಚರಿಸುವ ರಸ್ತೆಗಳನ್ನು ಲಕ ಲಕ ಎಂದು ಹೊಳೆಯುವಂತೆ ಮಾಡುವ ಟಾಸ್ಕ್ ನೀಡಲಾಯಿತು.
ಅದರಂತೆ ಪೀಣ್ಯದಿಂದ ಎಚ್ಎಎಲ್ ರಸ್ತೆ ತನಕ ರಸ್ತೆಯಲ್ಲಿದ್ದ ಅಷ್ಟೂ ಗುಂಡಿಗಳನ್ನು ಮುಚ್ಚಲಾಯಿತು. ಹೊಚ್ಚ ಹೊಸ ಡಾಂಬಾರು ಮೆತ್ತಿಕೊಂಡಿರುವ ರಸ್ತೆಗಳನ್ನು ಬೆಳ್ಳಂಬೆಳ್ಳಗೆ ಕಂಡ ಈ ಭಾಗದ ನಾಗರಿಕರು ಒಂದು ಕ್ಷಣ ಅವಾಕ್ಕಾದರು. ಈ ವಿಷಯ ತಿಳಿದ ಅಕ್ಕ ಪಕ್ಕ ಬಡಾವಣೆ ಜನ ಅಯ್ಯೋ ನಮ್ಮ ಲೇಔಟ್ ಕಡೆಗೂ ಪ್ರಧಾನಿ ಮೋದಿ ಬರ್ಲಪ್ಪಾ ಎಂದು ಬೇಡಿಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. [ಮೋದಿ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ]
ಕಸದ ಸಮಸ್ಯೆಯಿಂದ ಬಳಲುತ್ತಿದ್ದ ಗಾರ್ಡನ್ ಸಿಟಿ ಬೆಂಗಳೂರು ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಹೊಸ ಮೇಯರ್ ಅವರು ಕಸದ ಸಮಸ್ಯೆ ನಿವಾರಿಸುವ ಪಣ ತೊಟ್ಟಿದ್ದಾರೆ.
ಬೆಳಗ್ಗೆ ಮೇಯರ್ ಮೇಡಂ ಪರಿಶೀಲನೆಗೆ ಬರುವಷ್ಟರಲ್ಲಿ ರೋಡುಗಳು ರೆಡಿಯಾಗಿದ್ದವು. ಆದರೆ, ಮಾಧ್ಯಮಗಳು ಬಂದು ಮೇಡಂ ಮುಂದೆ ನಿಲ್ಲುವಷ್ಟರಲ್ಲಿ ಆನೇಪಾಳ್ಯ ಕೆಸರುಭರಿತ ರಸ್ತೆಯಲ್ಲಿ ಶಾಂತಕುಮಾರಿ ಅವರ ಸಂಚಾರ ಸಾಗಿತ್ತು. ರಸ್ತೆಗಳು ಸಿಂಗಾರಗೊಂಡ ಬೆನ್ನಲ್ಲೇ ಕಸ ವಿಲೇವಾರಿ ಕಾರ್ಯವೂ ಮುಗಿಸಲಾಯಿತು. ಹಗಲು ರಾತ್ರಿ ನಿದ್ದೆಕೆಟ್ಟು ಬಿಬಿಎಂಪಿಯವರು ಸ್ವಚ್ಛಗೊಳಿಸಿದ್ದನ್ನು ನೋಡಿದ ಜನತೆ ಇದೇ ರೀತಿ ಸ್ವಚ್ಛತಾ ಅಭಿಯಾನ ಯಾಕೆ ಮುಂದುವರೆಯಬಾರದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಂತೆ ಮೇಯರ್ ಅವರಿಂದ ಪ್ರಕಟಣೆ ಹೊರಬಿದ್ದಿದೆ.

ಸ್ವಚ್ಛ ಬೆಂಗಳೂರು ಸಪ್ತಾಹ ಅಭಿಯಾನ
ಸೆ.25ರಿಂದ ಸ್ವಚ್ಛ ಬೆಂಗಳೂರು ಸಪ್ತಾಹ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಲಿದೆಯಂತೆ. ಆಕ್ಟೊಬರ್ 6ರ ತನಕ ಈ ಅಭಿಯಾನ ನಡೆಯಲಿದ್ದು, ಶಾಲಾ ಕಾಲೇಜು, ಆಸ್ಪತ್ರೆ, ಹೋಟೆಲ್, ಸಂಘ, ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಿರಂತರವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಮೇಯರ್ ಶಾಂತಕುಮಾರಿ ಅವರು ಸೂಚನೆ ನೀಡಿದ್ದಾರೆ.

ಮೋದಿ ಆಗಮನದ ಸ್ವಾಗತಕ್ಕೆ ಸಜ್ಜಾದ ಬಿಬಿಎಂಪಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಯವರ ಆಗಮನದ ಹಿನ್ನಲೆ, ಎಚ್.ಎ.ಎಲ್. ವಿಮಾನ ನಿಲ್ದಾಣದ ಬಳಿ ನಡೆಯುವ ಕಾರ್ಯಕ್ರಮದ ಸಿಧ್ಧತೆಗಳನ್ನು ಪರಿಶೀಲಿಸಿದ ಮೇಯರ್ ಶಾಂತಕುಮಾರಿ ಜೊತೆಯಲ್ಲಿ ಉಪಮಹಾಪೌರರಾದ ರಂಗಣ್ಣ

ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡ ಮೇಯರ್
ಸಾರ್ವಜನಿಕರಲ್ಲಿ ವಿನ೦ತಿ, ಬ೦ಧುಗಳೆ, ಬೆ೦ಗಳೂರು ನಗರಕ್ಕೆ ಸ೦ಭ೦ದಪಟ್ಟ ಯಾವುದೇ ದೂರುಗಳನ್ನು ನನಗೆ ಬರೆಯಿರಿ. ದಯವಿಟ್ಟು ಗಮನಿಸಿ, ನಿಮ್ಮ ದೂರುಗಳನ್ನು ತಿಳಿಸುವಾಗ,
1) ನಿಮ್ಮ ಸಮಸ್ಯೆಯ ಸ೦ಪೂರ್ಣ ವಿವರ ತಿಳಿಸಿ. (ಸ೦ಪೂರ್ಣ ವಿಳಾಸ, ವಾರ್ಡ್ ನ೦. ನಿಮ್ಮ ಸಮಸ್ಯೆ )
2) ನಿಮ್ಮ ಸಮಸ್ಯೆ ರಸ್ತೆ, ಚರ೦ಡಿ, ಬೀದಿ ದೀಪ, ಕಸದ ಸಮಸ್ಯೆ, ಶುಚಿತ್ವಕ್ಕೆ ಸ೦ಬಂಧಪಟ್ಟಿದ್ದಲ್ಲಿ ದಯವಿಟ್ಟು ಅದರ ಭಾವಚಿತ್ರವನ್ನು ಕಳುಹಿಸಿ.
3) ನಿಮ್ಮ ಮೊಬೈಲ್ ನ೦. ಕಳುಹಿಸಿ. ನಿಮ್ಮ ಸಮಸ್ಯೆಗಳನ್ನು ಈ ಕೆಳಕ೦ಡ ವಿಳಾಸಕ್ಕೆ ಬರೆಯಿರಿ.
ಎಂದು ಫೇಸ್ ಬುಕ್ ನಲ್ಲಿ ಮೇಯರ್ ಶಾಂತಕುಮಾರಿ ಮನವಿ ಮಾಡಿಕೊಂಡಿದ್ದಾರೆ. ಅವರ ಫೇಸ್ ಬುಕ್ ಪುಟಕ್ಕೆ ಇಲ್ಲಿದೆ ದಾರಿ

ನಗರದ ವಿವಿಧೆಡೆ ಕಾಮಗಾರಿ ಪರಿಶೀಲನೆ
ಓಕಳೀಪುರಮ್ ಬಳಿ ಸಿಗ್ನಲ್ ಫ್ರೀ ಕಾರಿಡಾರ ನಿರ್ಮಾಣದ ಕಾಮಗಾರಿಯನ್ನು ಸಾರಿಗೆ ಸಚಿವರು ಮತ್ತು ಆಹಾರ ಸಚಿವರೊಡನೆ ಪರಿಶೀಲಿಸಿದ ಮೇಯರ್ ಶಾಂತಕುಮಾರಿ.











Click it and Unblock the Notifications