ಅನುಮತಿ ಇಲ್ಲದೆ ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ ಮಂಡನೆ
ಬೆಂಗಳೂರು, ಜುಲೈ 20: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಎಲ್ ತಿದ್ದುಪಡಿ ಮಸೂದೆ) 2023 ಅನ್ನು ಶುಕ್ರವಾರ ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಂಡಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, "1978ರಲ್ಲಿ ಈ ಕಾನೂನನ್ನು ಇದೇ ಸದನ ಮಂಜೂರು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಸರ್ಕಾರದಿಂದ ಮಂಜೂರಾತಿಯಾಗಿರುವ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೇ ಮಾರಿದ್ದರೆ ಅಂತಹ ಜಮೀನುಗಳನ್ನು ಮೂಲ ಮಂಜೂರುದಾರರಿಗೆ ಮತ್ತೆ ಅವರಿಗೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಕಾನೂನು ತಂದಿತ್ತು" ಎಂದು ಮಾಹಿತಿ ನೀಡಿದ್ದಾರೆ.

ಮುಂದುವರಿದು, "ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡವರಾಗಿದ್ದ ದಲಿತರು ತಿಳುವಳಿಕೆಯ ಕೊರತೆಯಿಂದ ಅವರ ಜಮೀನುಗಳನ್ನು ಸರ್ಕಾರದ ಅನುಮತಿಯಿಲ್ಲದೇ ಬೇರೆಯವರು ಕೊಂಡುಕೊಳ್ಳುವುದನ್ನು ಕಡಿವಾಣ ಹಾಕಲು ಮುಂದಾಗಿದ್ದರು" ಎಂದು ಅಧಿವೇಶದಲ್ಲಿ ಹೇಳಿದ್ದಾರೆ.
ಅಂದು ದಲಿತರಿಗೆ ಇದ್ದ ಏಕೈಕ ಆಸ್ತಿ ಸರ್ಕಾರ ಮಂಜೂರು ಮಾಡಿದ್ದ ಜಮೀನನ್ನು ಅವರಿಗೆ ಉಳಿಸಲು ಈ ಮಾದರಿ ಕಾನೂನನ್ನು ರಚನೆ ಮಾಡಿ ಎಲ್ಲಾ ರಾಜ್ಯಗಳಿಗೆ ಕಳಿಸಿಕೊಟ್ಟಿದ್ದರು. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಮತ್ತು ಕಂದಾಯ ಸಚಿವರಾಗಿದ್ದ ಬಸವಲಿಂಗಪ್ಪನವರು ಮಸೂದೆ ಮಂಡಿಸಿದ್ದರು. 1978 ರಿಂದ ಈ ಕಾನೂನು ಜಾರಿಯಲ್ಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಈ ಕಾನೂನಿನ ಅನ್ವಯ ನಮ್ಮ ಜಮೀನು ವಾಪಸ್ ಕೊಡಬೇಕೆಂದು ಪರಿಶಿಷ್ಟ ಜಾತಿಯ ಒಬ್ಬರು ದಾವೆ ಹೂಡಿದ್ದರು. ಆದರೆ ಎಸಿಯವರು ನಿಮ್ಮ ಜಮೀನು ಮಾರಿ ಬಹಳ ವರ್ಷಗಳಾಗಿವೆ ಹಾಗಾಗಿ ಈಗ ಕೇಳಲು ಬರುವುದಿಲ್ಲ ಎಂದು ತೀರ್ಪು ನೀಡಿದ್ದರು. ಕೊನೆಗೆ ಅದೇ ಕೇಸು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರೀಂ ಕೋರ್ಟ್ ಸೆಕ್ಷನ್ 5 ರಲ್ಲಿ ಕಾಲಮಿತಿ ನಿಗದಿ ಮಾಡಿಲ್ಲ ಅನ್ನುವ ನ್ಯೂನತೆಯನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಹಕ್ಕನ್ನು ಕೊಡಲಾಗಿಲ್ಲ ಎಂದು ಸಚಿವ ವಿವರಿಸಿದ್ದಾರೆ.

ಆದರೆ ಮೂಲ ಕಾನೂನಿನಲ್ಲಿ ಯಾವತ್ತೇ ಭೂಮಿ ಮಂಜೂರಾಗಿದ್ದರೂ, ಯಾವತ್ತೂ ಪರಬಾರೆಯಾಗಿದ್ದರೂ ಸಹ ಯಾವತ್ತು ಬೇಕಾದರೂ ಪ್ರಶ್ನಿಸಿ ಪರಬಾರೆ ಮಾಡಿಕೊಳ್ಳಬೇಕು ಎಂದಿದೆ. ಆದರೆ ಕಾನೂನಿನಲ್ಲಿ ಕಾಲಮಿತಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುಪ್ರೀಂ ಹೇಳಿದೆ. ಹಾಗಾಗಿ ಎಸಿಗಳು ಸುಪ್ರೀಂ ಕೋರ್ಟ್‌ನ ಈ ಆದೇಶ ಇಟ್ಟುಕೊಂಡು ಕಾಲಮಿತಿ ಮೀರಿದೆ ಎಂಬ ನೆಪ ಹೇಳಿ ಅರ್ಜಿಗಳನ್ನು ತಳ್ಳಿಹಾಕುವುದು ನಡೆಯುತ್ತಿದೆ. 2017 ರಿಂದ ದಲಿತ ಸಮುದಾಯಗಳು ಈ ಕಾನೂನಿನ ನ್ಯೂನತೆ ಸರಿಪಡಿಸಲು ತಿದ್ದುಪಡಿ ತರಲು ಹೋರಾಟ, ಧರಣಿ ಮಾಡುತ್ತಾ ಬಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೇ, 'ನಮ್ಮ ಸರ್ಕಾರ ಬಂದ ಕೂಡಲೇ ನ್ಯೂನತೆ ಸರಿಪಡಿಸಿ, 1978ರ ಮೂಲ ಕಾನೂನಿಗೆ ಜೀವ ತುಂಬುತ್ತೇವೆ' ಎಂದು ಹೇಳಿದ್ದೆವು. ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರು ಚಿತ್ರದುರ್ಗದ ಸಮಾವೇಶದಲ್ಲಿ ದಲಿತರಿಗೆ ಈ ಮಾತನ್ನು ಕೊಟ್ಟಿದ್ದೆವು. ದಲಿತರು ಬಿಜೆಪಿಗೂ ಮನವಿ ಮಾಡಿದ್ದರೂ, ಬಿಜೆಪಿ 4 ವರ್ಷ ಅಧಿಕಾರದಲ್ಲಿದ್ದೂ ಸಹ ಮಾಡಿಲ್ಲ. ಫೆಬ್ರವರಿ ತಿಂಗಳಲ್ಲಿ 162ರಲ್ಲಿ 160ನೇ ಪ್ಯಾರದಲ್ಲಿ ಪ.ಜಾ ಮತ್ತು ಪ.ಪಂದವರ ಜಮೀನನ್ನು ಸಂರಕ್ಷಿಸಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಪೊಳ್ಳು ಭರವಸೆ ನೀಡಿದ್ದರು. ಆದರೆ ನ್ಯಾಯ ಕೊಡದೇ ಅನ್ಯಾಯ ಮುಂದುವರೆಸಿದ್ದರು ಎಂದು ಆರೋಪಿಸಿದ್ದಾರೆ.
ನಮ್ಮ ಸರ್ಕಾರ ಮಾತು ಕೊಟ್ಟಂತೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಮೊದಲನೇ ಅಧಿವೇಶನದಲ್ಲಿಯೇ ನಾವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಂಡಿಸುತ್ತಿದ್ದೇವೆ. "ಸೆಕ್ಷನ್ 5(1)ಸಿ ನಲ್ಲಿ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಈ ಅಧಿನಿಯಮದ ಉಪಬಂಧಗಳನ್ನು ರದ್ದುಪಡಿಸಲು ಯಾವುದೇ ಕಾಲಮಿತಿ ಇರತಕ್ಕದ್ದಲ್ಲ ಎಂಬ ತಿದ್ದುಪಡಿ ಸೇರಿಸಿದ್ದೇವೆ" ಎಂದಿದ್ದಾರೆ.
ದಲಿತರ ಜಮೀನು ಉಳಿಯಬೇಕೆಂಬ ಸದುದ್ದೇಶದಿಂದ ಇದನ್ನು ಮಾಡಿದ್ದೇವೆ. ಇದು ಹೊಸ ಕಾನೂನು ಅಲ್ಲ. ಕಾಲಮಿತಿಯ ಏನು ಹೇಳಿಲ್ಲ ಎಂದು ಸುಪ್ರಿಂ ಹೇಳಿದೆ. ಹಾಗಾಗಿ ಮೂಲ ಕಾನೂನಿನಲ್ಲಿ ನಾವು ಕಾಲಮಿತಿ ಇಲ್ಲ ಎಂದು ತಿದ್ದುಪಡಿ ಮಾಡುತ್ತಿದ್ದೇವೆ. ಇದು ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ಇರಲಿ, ಎಸಿ, ಡಿಸಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲೇ ಇರಲಿ, ಪೆಂಡಿಂಗ್ ಇದ್ದರೂ ಸಹ ಅವುಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಯಾವುದಾದರೂ ಪ್ರಕರಣಗಳು ನ್ಯಾಯಸಮ್ಮತವಾಗಿ ವಿಲೇ ಆಗಿಹೋಗಿದ್ದರೆ ಅವು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ಕಾನೂನು ಜಾರಿಗೆ ಬಂದ ನಂತರ ಪೆಂಡಿಂಗ್ ಇರುವ ಕೇಸ್‌ಗಳಿಗೂ ಅನ್ವಯವಾಗುತ್ತದೆ ಎಂದು ವಿವರಿಸಿದ್ದಾರೆ.
ಮಸೂದೆ ಕುರಿತು ಮಾತನಾಡಿದ ಮಾಜಿ ಸಚಿವ ಪಿ.ಎಂ ನರೇಂದ್ರ ಸ್ವಾಮಿ, "2017ರಿಂದ ಈಗಾಗಲೇ ದಲಿತರ ವಿರುದ್ಧವಾಗಿ ತೀರ್ಪು ಬಂದಿರುವ ಪ್ರಕರಣಗಳಿಗೂ ಈ ಕಾಯ್ದೆ ಅನ್ವಯವಾಗುವಂತೆ ತಿದ್ದುಪಡಿ ತರಬೇಕು. ಇಲ್ಲದಿದ್ದರೆ ಬಹಳಷ್ಟು ಜಮೀನು ಈಗಾಗಲೇ ದಲಿತರಿಂದ ಕಿತ್ತುಕೊಳ್ಳಲಾಗಿದೆ, ಅದು ವಾಪಸ್ ಬರುವುದಿಲ್ಲ" ಎಂದಿದ್ದಾರೆ.
ಪಿ.ಎಂ ನರೇಂದ್ರ ಸ್ವಾಮಿ ಅವರಿಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, "2017ರಿಂದ ಇತ್ತೀಚೆಗೆ 1,558 ಪ್ರಕರಣಗಳು ಖರೀದಿದಾರರ ಪರವಾಗಿ ಇತ್ಯರ್ಥವಾಗಿವೆ. 1,003 ಪ್ರಕರಣಗಳು ಪರಿಶಿಷ್ಟರ ಪರವಾಗಿ ಇತ್ಯರ್ಥವಾಗಿವೆ. ಗಮನಿಸಿಬೇಕಾದ ವಿಚಾರವೆಂದರೆ ಕಾನೂನಿನಲ್ಲಿ ಡಿಸಿಗಳಿಗೆ ಅಪೀಲ್ ಹೋಗುವ ಪವರ್ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳ ಮುಂದೆ 2303 ಅಪೀಲ್‌ಗಳು ಹೋಗಿವೆ. ಹೈಕೋರ್ಟ್‌ನಲ್ಲಿ 719 ಅಪೀಲ್‌ಗಳು ಇವೆ. ಎಸಿ ಕೋರ್ಟ್‌ನಲ್ಲಿ ಮೂಲ ಮಂಜೂರುದಾರರ ವಿರುದ್ಧ ಆಗಿದ್ದರೂ ಅವರು ಮೇಲ್ಮನವಿ ಹೋಗಿದ್ದಾರೆ. ಹಾಗಾಗಿ ಆ ಪ್ರಕರಣಗಳಿಗೂ ಈ ತಿದ್ದುಪಡಿ ಅನ್ವಯಿಸುವುದರಿಂದ 95% ಪ್ರಕರಣಗಳಿಗೆ ನ್ಯಾಯ ಸಿಗುತ್ತದೆ" ಎಂದು ಭರವಸೆ ನೀಡಿದ್ದಾರೆ.
-
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ











Click it and Unblock the Notifications