Property Tax: ಬೆಂಗಳೂರು ವಾಣಿಜ್ಯ ಸ್ವತ್ತುಗಳ ಪರಿವೀಕ್ಷಣೆ ಆರಂಭ, ಮಾಲೀಕರಲ್ಲಿ ತಳಮಳ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಪ್ರಸ್ತಕ ಆರ್ಥಿಕ ವರ್ಷದಲ್ಲಿ 6500 ಕೋಟಿ ರೂ. ಅಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಕ್ರಮಗಳ ಜಾರಿಗೆ ಮುಂದಾಗಿದೆ. ಅದರ ಬೆನ್ನಲ್ಲೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಸ್ವತ್ತುಗಳಿಗೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಈಗಾಗಲೇ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ, ಪಾವತಿಸದಿದ್ದರೆ ಸೀಲ್ ಮಾಡಿ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಸೂಚಿಸಿದ್ದರು. ಇದಾಗಿ ಎರಡು ದಿನಗಳಲ್ಲಿ ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ.ರಾಜೇಂದ್ರ ಕೆ.ವಿ. ಅವರು ವಾಣಿಜ್ಯ ಸ್ವತ್ತುಗಳ ಕಂದಾಯ ಪರಿವೀಕ್ಷಣೆ ನಡೆಸುವಂತೆ ನಿರ್ದೇಶಿಸಿದ್ದಾರೆ.

ಪರಿವೀಕ್ಷಣೆಯಲ್ಲಿ ಏನೆಲ್ಲ ಪರಿಶೀಲನೆ ಆಗಲಿದೆ
ಮಲ್ಲೇಶ್ವರಂ ವಿಭಾಗದ ವಾರ್ಡ್ ಸಂಖ್ಯೆ 64ರ ಮಾರ್ಗೋಸ ರಸ್ತೆಯಲ್ಲಿ ವಸತಿಯೇತರ (ವಾಣಿಜ್ಯ) ಸ್ವತ್ತುಗಳ ಕಂದಾಯ ಪರಿಷ್ಕರಣೆ ಅಭಿಯಾನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಈ ಮೇಲಿನಂತೆ ಸೂಚಿಸಿದರು. ಮಾರ್ಗೋಸ ರಸ್ತೆಯ ವಾಣಿಜ್ಯ ಸ್ವತ್ತುಗಳ ಮಾಲೀಕರು ಸ್ವಂತ ಬಳಕೆ ಎಂದು ಸೂಚಿಸಿ ಬಾಡಿಗೆಗೆ ನೀಡಿರುವುದು, ಖಾಲಿ ಜಾಗಗಳನ್ನು ಕಾರು ನಿಲುಗಡೆ ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು, ಎಸ್.ಎ.ಎಸ್ (ಸ್ವಯಂ ಮೌಲ್ಯಮಾಪನ ವ್ಯವಸ್ಥೆ) ಪ್ರಕಾರ ಆಸ್ತಿ ತೆರಿಗೆ ಪಾವತಿಸುತ್ತಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ.
ಆಸ್ತಿ ಮಾಲೀಕರು ಎಸ್.ಎ.ಎಸ್ ಮೂಲಕ ಸ್ವತ್ತುಗಳ ವಿವರಗಳನ್ನು ಕಡಿಮೆ ತೋರಿಸಿ ಆಸ್ತಿ ತೆರಿಗೆ ಪಾವತಿಸಿರುವ ಪ್ರಕರಣಗಳನ್ನು ಪರಿಶೀಲಿಸಿದರು. ಕಂದಾಯ ಪರಿಷ್ಕರಣೆ ನಡೆಸಿ ನಿಗದಿತ ತೆರಿಗೆಯನ್ನು ವಸೂಲಿ ಮಾಡಬೇಕೆಂದು ತಿಳಿಸಿದರು. ಖಾಲಿ ಸ್ವತ್ತುಗಳನ್ನು ವಸತಿಯೇತರವಾಗಿ, ಅಂದರೆ ಖಾಸಗಿ ವಾಹನ ನಿಲುಗಡೆ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವಲ್ಲಿ ಅದರ ಅನುಸಾರ ತೆರಿಗೆ ಪಾವತಿಸುತ್ತಿರುವುದನ್ನು ಪರಿಶೀಲಿಸಲು ಹಾಗೂ ನೆಲಮಹಡಿ ಪ್ರದೇಶವನ್ನು ಯಾವ ಉದ್ದೇಶಕ್ಕಾಗಿ ಬಳಸಲು ನಕ್ಷೆ ಮಂಜೂರಾತಿ ಪಡೆದಿದ್ದಾರೆ ಎಂಬುದನ್ನೂ ಪರಿಶೀಲಿಸಲು ಅಧಿಕಾರಿಗಳಿಗೆ ಹೇಳಿದರು.
ತೆರಿಗೆ ಬಾಕಿ ಪಾವತಿಸಿ, ಕ್ರಮದಿಂದ ತಪ್ಪಿಸಿಕೊಳ್ಳಿ
ಈ ಮೂಲಕ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಮನೆ ಹಾಗೂ ವಾಣಿಜ್ಯ ಸತ್ತುಗಳ ಆಸ್ತಿ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಇಲ್ಲಿ ಗಮನಿಸಬೇದ ಸಂಗತಿ. ಯಾರೆಲ್ಲ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಿ ಅವರೆಲ್ಲ ನಿಗದಿತ ಸಮಯದೊಳಗೆ ಪಾವತಿಸಿದರೆ ಜಿಬಿಎ ಕ್ರಮಕ್ಕೆ ಒಳಗಾಗುವುದು ತಪ್ಪಲಿದೆ.












Click it and Unblock the Notifications