"ಕರ್ನಾಟಕ ರತ್ನ ಎಸ್.ಎಂ.ಕೃಷ್ಣ": ಮರಣೋತ್ತರ ಕರ್ನಾಟಕ ರತ್ನ ನೀಡಲು ಸರ್ಕಾರಕ್ಕೆ ಮನವಿ
ಬೆಂಗಳೂರು, ಡಿಸೆಂಬರ್ 11: ಕರ್ನಾಟಕ ರಾಜ್ಯ ರಾಜಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆ ನಿರ್ವಹಿಸುವ ಮೂಲಕ ನಾಡಿಗೆ ತಮ್ಮದೇ ಆದ ಸೇವೆ ನೀಡಿದ ಎಸ್.ಎಂ. ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದೆ. ನಾಡಿನ ಜನರು ಕಂಬನಿ ಮಿಡಿಯುತ್ತಿದ್ದಾರೆ. ಅಪಾರ ಸೇವೆ, ಜೀವನ, ಕೊಡುಗೆ ಪರಿಗಣಿಸಿ ಎಸ್.ಎಂ.ಕೃಷ್ಣ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ನೀಡಬೇಕು ಕೂಗು ಎದ್ದಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜಕಾರಣದ ಧೀಮಂತ ನಾಯಕ ಎಸ್.ಎಂ.ಕೃಷ್ಣ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆ ಬಳಲುತ್ತಿದ್ದ ಅವರು ಮಂಗಳವಾರ ನಿಧನರಾಗಿದ್ದು, ಇಂದು ಬುಧವಾರ (ಡಿ.11) ಹುಟ್ಟೂರಾದ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ರಾಜಕೀಯದ ವಿವಿಧ ಹಂತಗಳಲ್ಲಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಎಸ್.ಎಂ.ಕೃಷ್ಣ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ನೀಡಬೇಕು ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ ಅವರು, "ಕರ್ನಾಟಕ ರತ್ನ ಎಸ್.ಎಂ.ಕೃಷ್ಣ" ಎಂದು ಸಂಬೋಧಿಸಿದ್ದಾರೆ.
ಶಾಸಕರಾಗಿ, ಸಚಿವರಾಗಿ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ.
ಅಷ್ಟಲ್ಲದೇ ವಿದೇಶಾಂಗ ಸಚಿವರಾಗಿಯು ಎಸ್‌ಎಂ ಕೃಷ್ಣ ಅವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದರು.
ರಾಜ್ಯದ ಅತ್ಯುನ್ನತ ಪ್ರಶಸ್ತಿ ನೀಡುವುದು ಸೂಕ್ತ
ಕರುನಾಡಿನ ಪ್ರಗತಿಗೆ ನೀಡಿದ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರು ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
ಆದ್ದರಿಂದ ತಾವು ಈ ʼಕರ್ನಾಟಕ ರತ್ನʼ (ಮರಣೋತ್ತರ) ಪ್ರಶಸ್ತಿ ನೀಡುವ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ನಟ, ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿತ್ತು. ಚಿತ್ರರಂಗದಲ್ಲಿ ಮಾಡಿದ ಸಾಧನೆ, ಜೊತೆಗೆ ಸಾಮಾಜಿಕ ಸೇವೆ ಕಂಡು ರಾಜ್ಯ ಸರ್ಕಾರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿತ್ತು. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದರು. ಇದೀಗ ಪುನೀತ್ ಅವರ ನಂತರ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಈ ಪ್ರಶಸ್ತಿ ನೀಡುವಂತೆ ಕೂಗು ಕೇಳಿ ಬಂದಿದೆ.












Click it and Unblock the Notifications