ಗಣರಾಜ್ಯೋತ್ಸವಕ್ಕೆ ಗೈರು; ಬಿಬಿಎಂಪಿ ಅಧಿಕಾರಿಗಳ ವೇತನ ಕಡಿತ
ಬೆಂಗಳೂರು, ಜನವರಿ 26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವು ಅಧಿಕಾರಿಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾದರು. ಮೇಯರ್ ಈ ಕುರಿತು ಅಸಮಾಧಾನಗೊಂಡಿದ್ದು, ವೇತನ ಕಡಿತಗೊಳಿಸಲು ಚಿಂತಿಸಿದ್ದಾರೆ.
ಭಾನುವಾರ ಬಿಬಿಎಂಪಿ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಮೇಯರ್ ಗೌತಮ್ ಕುಮಾರ್ ಜೈನ್, ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆಗೆ ಹಲವು ಅಧಿಕಾರಿಗಳು ಗೈರಾಗುತ್ತಿದ್ದರು. ಆದ್ದರಿಂದ, ಇಂದು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿತ್ತು. ಭಾನುವಾರ ಗಣರಾಜ್ಯೋತ್ಸವ ಬಂದ ಕಾರಣ ಹಲವು ಅಧಿಕಾರಿಗಳು ಗೈರಾಗಿದ್ದರು.

ಬಿಬಿಎಂಪಿ ಮೇಯರ್ ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗೈರಾದ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಲು ತೀರ್ಮಾನಿಸಿದ್ದಾರೆ. ಶನಿವಾರ ಮೇಯರ್ ನೀಡಿದ ಸೂಚನೆಯನ್ನೂ ಅಧಿಕಾರಿಗಳು ಪಾಲಿಸಿಲ್ಲ.
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಹಾಜರಾಗಿಲ್ಲ. ಗೈರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.












Click it and Unblock the Notifications