Bengaluru: 5 ವರ್ಷದಿಂದ ಹೊಟ್ಟೆಯಲ್ಲೇ ಇತ್ತು 2cm ಉದ್ದದ ಮೀನಿನ ಮುಳ್ಳು, ಆಮೇಲಾಗಿದ್ದೇನು...
ಬೆಂಗಳೂರು, ಅಕ್ಟೋಬರ್ 28: ಮನುಷ್ಯನಿಗೆ ತಾನು ಇಷ್ಟಪಡುವ ಆಹಾರವೇ ಕೆಲವೊಮ್ಮೆ ಇನ್ನಿಲ್ಲದ ಸಮಸ್ಯೆ ತಂದೊಡ್ಡಿಬಿಡುತ್ತವೆ ಎಂಬುದಕ್ಕೆ ಇಲ್ಲೊಂದು ಘಟನೆ ವರದಿಯಾಗಿದೆ. ಮೀನು ಯಾರಿಗೆತಾನೆ ಇಷ್ಟವಿರುವುದಿಲ್ಲ. ಮಾಂಸಾಹಾರಿಗಳಿಗೆ ಮೀನು ಬಲು ಇಷ್ಟ. ಹೀಗೆ ಇಷ್ಟವೆಂದು ಮೀನು ತಿಂದ ವ್ಯಕ್ತಿಯೊಬ್ಬರು ಬರೋಬ್ಬರಿ ಐದು ವರ್ಷಗಳಿಂದ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ.
61 ವರ್ಷದ ವ್ಯಕ್ತಿಯೊಬ್ಬರು ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರು ಕರೆ ತಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲಿ ತಜ್ಞ ವೈದ್ಯರು ರೋಗಿಯನ್ನು ತಪಾಸಣೆ ಮಾಡಿದ ವೇಳೆ ಅವರ ಹೊಟ್ಟೆಯಲ್ಲಿ ಮೀನಿನ ಮುಳ್ಳು (Fish Bone) ಇರುವುದು ಪತ್ತೆಯಾಗಿದೆ.

ಹೊಟ್ಟೆಯಲ್ಲಿತ್ತು 2cm ಉದ್ದದ ಮೀನಿನ ಮುಳ್ಳು
ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 2 ಸೆಂ.ಮೀ ಉದ್ದದಷ್ಟು ಮೀನಿನ ಮುಳ್ಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಬೆಂಗಳೂರು ನಾಗರಭಾವಿ ಫೋರ್ಟಿಸ್ ಆಸ್ಪತ್ರೆ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಅವರು ಮಾಹಿತಿ ನೀಡಿದ್ದಾರೆ.
ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಊಟದ ವೇಳೆ ಮೀನು ಸೇವಿಸಿದ್ದರು. ಈ ವೇಳೆ ಗಂಟಲಿನಲ್ಲಿಅವರಿಗೆ ಮೀನಿನ ಮುಳ್ಳು ಸಿಲುಕಿತ್ತು. ತದನಂತದ ಅದು ಹೊಟ್ಟೆ ಸೇರಿಕೊಂಡಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮುಳ್ಳು ತೆಗೆಸಿಕೊಂಡಿದ್ದಾರೆ. ಮತ್ತೊಂದು ಮುಳ್ಳು ಇರುವುದು ಅವರಿಗೆ ತಿಳಿದಿರಲಿಲ್ಲ. ಹೊಟ್ಟೆಯಲ್ಲಿ ಉಳಿದುಕೊಂಡಿದ್ದ ಮುಳ್ಳಿನಿಂದಲೇ ಅವರು ವರ್ಷಗಳ ಕಾಲ ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸಿದ್ದಾರೆ.

ಎರಡು ಪೈಕಿ ಒಂದು ಮುಳ್ಳು ಹೊಟ್ಟೆಯಲ್ಲೇ ಉಳಿದಿತ್ತು
ಅಂದು ಎರಡು ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಒಂದು ಮುಳ್ಳು ಹೊಟ್ಟೆಯಲ್ಲೇ ಉಳಿದಿದೆ. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸಿದ್ದಾರೆ. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮುಳ್ಳು ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿತ್ತು ಎಂದು ರೋಗಿಯಿಂದ ಮಾಹಿತಿ ಪಡೆದಿರುವ ಪೋರ್ಟಿಸ್ ವೈದ್ಯರು ತಿಳಿಸಿದ್ದಾರೆ.
ಫೋರ್ಟಿಸ್ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ಕೊನೆಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮುಳ್ಳು ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೆ ಆಗ ತಿಳಿದು ಬಂದಿದೆ.
ನಂತರ ರೋಗಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೀನಿನ ಮುಳ್ಳನ್ನು ತೆಗೆಯಲಾಗಿದೆ. ಸದ್ಯ ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಪೋರ್ಟಿಸ್ ಆಸ್ಪತ್ರೆಯು ಪ್ರಕಟಣೆಯಲ್ಲಿ ವಿವರಿಸಿದೆ. ಸದ್ಯ ರೋಗಿಯ ಕುಟುಂಬಸ್ಥರು ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications