ಬೆಂಗಳೂರಿಗರಿಗೆ ಸಖತ್ತಾಗಿ ನೆರವಾಗಲಿದೆ ಹೊಸೂರು ಏರ್ ಪೋರ್ಟ್!
ಉಡಾನ್ ಯೋಜನೆಯಡಿ ಮೇಲ್ದರ್ಜೆಗೇರಿಸ್ಪಟ್ಟಿರುವ ಹೊಸೂರು ವಿಮಾನ ನಿಲ್ದಾಣವು ಬೆಂಗಳೂರು ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿದೆ. ದೇಶೀಯ ಮಟ್ಟದ ವಿಮಾನ ಸೇವೆ ಬಯಸುವವರಿಗೆ ಹೊಸೂರು ವಿಮಾನ ನಿಲ್ದಾಣ ಹಲವಾರು ಅನುಕೂಲ ಕಲ್ಪಿಸಲಿದೆ.
ಬೆಂಗಳೂರು, ಜೂನ್ 21: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಆಧುನೀಕರಣಗೊಂಡಿರುವ ತಮಿಳುನಾಡು ರಾಜ್ಯದ ಹೊಸೂರು ವಿಮಾನ ನಿಲ್ದಾಣದ ಉದ್ಘಾಟನೆ ಸನ್ನಿಹಿತವಾಗುತ್ತಿದೆ.
ಈ ವಿಮಾನ ನಿಲ್ದಾಣ ಉದ್ಘಾಟನೆಯಾದರೆ, ಅದು ತಮಿಳುನಾಡಿನ ಜನತೆಗಿಂತ ಹೆಚ್ಚಾಗಿ ನೆರವಾಗುವುದು ಬೆಂಗಳೂರಿಗರಿಗೆ ಎಂದು ಹೇಳಲಾಗುತ್ತಿದೆ.
ಈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಈ ಹಿಂದೆ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗಲೇ ಕೇಂದ್ರ ಸರ್ಕಾರದ ನಾಗರಿಕ ವಿಮಾನ ಯಾನ ಇಲಾಖೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಅದರ ಫಲವಾಗಿಯೇ, ಈ ನಿಲ್ದಾಣ ಮೇಲ್ದರ್ಜೆಗೆ ಏರಿಸಲ್ಪಟ್ಟಿದೆ.
ಉಡಾನ್ ಯೋಜನೆಯಡಿ ಶೀಘ್ರದಲ್ಲೇ ಈ ನಿಲ್ದಾಣ ಕಾರ್ಯಾರಂಭ ಮಾಡಲಿದ್ದು, ಇದು ಬೆಂಗಳೂರಿನ ನೈರುತ್ಯ ದಿಕ್ಕಿನಲ್ಲಿರುವ ಜನತೆಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಹೇಳಲಾಗಿದೆ. ಇದು ಹೇಗೆ, ಎತ್ತ? ಇಲ್ಲಿದೆ ಒಂಚೂರು ಮಾಹಿತಿ.
(ಚಿತ್ರಗಳು: ಸಾಂದರ್ಭಿಕ)

ಪೀಕ್ ಹವರ್ ನಲ್ಲಂತೂ ಪ್ರಯಾಣಿಕರ ಗೋಳು ಕೇಳಬೇಡಿ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅದರ ಸುತ್ತಿಲಿನ ಪ್ರಾಂತ್ಯಗಳಲ್ಲಿನ ಜನತೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಹರಸಾಹಸ ಪಡಬೇಕಿದೆ. ಪೀಕ್ ಹವರ್ ಗಳಲ್ಲಂತೂ ಅವರ ಪಾಡು ಹೇಳತೀರದು. ಹೊಸೂರಿನಲ್ಲಿ ದೇಶೀಯ ವಿಮಾನ ನಿಲ್ದಾಣವು ಆರಂಭವಾದರೆ, ಇದು ದೇಶೀಯ ಮಟ್ಟದಲ್ಲಿ ವಿಮಾನ ಸೇವೆ ಬಯಸುವ ಪ್ರಯಾಣಿಕರಿಗೆ ಹೊಸ ಅನುಕೂಲ ಕಲ್ಪಿಸುತ್ತದೆ. ಏಕೆಂದರೆ, ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವಿನ ಅಂತರ ಹೋಲಿಸಿದರೆ, ಎಲೆಕ್ಟ್ರಾನಿಕ್ ಸಿಟಿಯಿಂದ ಹೊಸೂರು ಹತ್ತಿರದಲ್ಲಿದೆ.

ಕೇವಲ 35 ಕಿ.ಮೀ. ಅಷ್ಟೇ!
ಎಲೆಕ್ಟಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸುಮಾರು 80 ಕಿ.ಮೀ. ದೂರದಲ್ಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಅಲ್ಲಿಗೆ ಸಾಗಲು ಸುಮಾರು ಎರಡೂವರೆ ಗಂಟೆಗಳೇ ಬೇಕು. ಆದರೆ, ಎಲೆಕ್ಟಾನಿಕ್ ಸಿಟಿಯಿಂದ ಹೊಸೂರಿಗೆ ಕೇವಲ 35 ಕಿ.ಮೀ. ದೂರವಿದೆ. ಇಲ್ಲಿಗೆ ಹೋಗಲು ಸುಮಾರು ಅರ್ಧ ಗಂಟೆ ಸಾಕು.

ಎಲ್ಲವೂ ಸಲೀಸು!
ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಕ್ಯಾಬ್ ಗಳಿಗೆ ಏನಿಲ್ಲವೆಂದರೂ, 1, 500 ರು. ತೆರಬೇಕು. ಆದರೆ, ಹೊಸೂರಿಗೆ ಹೋಗುವುದು ಅಂಥಾ ದುಬಾರಿಯಾಗದು.

ದೇಶೀಯ ಪ್ರಯಾಣಿಕರಿಗೆ ವರದಾನ
ಬೆಂಗಳೂರಿನಿಂದ ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಸೇರಿದಂತೆ ಹಲವಾರು ನಗರಗಳಿಗೆ ಪ್ರಯಾಣ ಬೆಳೆಯುವ ಪ್ರಯಾಣಿಕರು ತಮ್ಮ ನಿಗದಿತ ಊರುಗಳಿಗೆ ಆದಷ್ಟು ಬೇಗನೇ ತಲುಪಲು ಸಹಾಯವಾಗುತ್ತದೆ.

ಏನೇನು ವಿಶೇಷತೆಗಳಿವೆ ಆ ನಿಲ್ದಾಣದಲ್ಲಿ?
ಮೇಲ್ದರ್ಜೆಗೇರಿರುವ ಹೊಸೂರು ವಿಮಾನ ನಿಲ್ದಾಣ, ಏರ್ ಬಸ್ ಎ320 ಹಾಗೂ ಬೋಯಿಂಗ್ 737ಎಸ್ ಗಾತ್ರದ ವಿಮಾನಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶವನ್ನು ಹೊಂದಿದೆ. ರನ್ ವೇ 2.10 ಕಿ.ಮೀ ಇದ್ದು, 248 ಎಕರೆ ವಿಸ್ತೀರ್ಣವಾಗಿದೆ.












Click it and Unblock the Notifications