ಆಸ್ತಿಗೆ ಆಸೆ ಬಿದ್ದು ರೇಖಾ ಹತ್ಯೆ ಮಾಡಿದ ಮಾಲಾಗೆ ದಕ್ಕಿದ್ದು ಜೈಲು!
ಬೆಂಗಳೂರು, ಜೂ. 28: ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹಿಂದಿನ ಹಲವು ರಹಸ್ಯಗಳನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ. ಆಸ್ತಿ ಮತ್ತು ಅಧಿಕಾರಕ್ಕಾಗಿ ಸಂಚು ರೂಪಿಸಿದ ಕದಿರೇಶ್ ಸಹೋದರಿ, ರೌಡಿ ಲೇಡಿ ಮಾಲಾ ತನ್ನ ಸಹೋದರನ ಪತ್ನಿಯನ್ನು ಹತ್ಯೆ ಮಾಡಿಸಿದ್ದಾಳೆ. ತನಗೇನೂ ಗೊತ್ತಿಲ್ಲದವಳ ತರ ನಾಟಕವಾಡಿದ ಮಾಲಾ ಮತ್ತು ಆಕೆಯ ಪುತ್ರನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ರೇಖಾ ಕದಿರೇಶ್ ಹತ್ಯೆಗೂ ಮುನ್ನ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಈಕೆಯ ಸಂಚಿನ ರಹಸ್ಯ ಬಯಲಾಗಿದೆ.
ರೌಡಿ ಲೇಡಿಯ ಕರಾಬ್ ಹಿಸ್ಟರಿ:
ತಮಿಳುನಾಡು ಮೂಲದ ಮಾಲಾ ಯಾವ ರೌಡಿಗೂ ಕಡಿಮೆ ಇಲ್ಲ. ಹಲವು ವರ್ಷಗಳ ಹಿಂದೆಯೇ ಜೋಪಡಿ ರಾಜೇಂದ್ರನನ್ನು ಹತ್ಯೆ ಮಾಡಿಸಿದ್ದಳು. ಸಹೋದರ ಜತೆಗೆ ಕೊಲೆ ಪ್ರಕರಣದ ಆರೋಪಿಯಾಗಿದ್ದವಳು ಕದಿರೇಶ್ ಸಹೋದರಿ ಮಾಲಾ ಎಂಬಾಕೆಯ ಹೆಗ್ಗಳಿಕೆ. ಗಾಂಜಾ ಮಾರಾಟ ಮಾಡುತ್ತಿದ್ದ ಮಾಲಾ ಭಕ್ಷಿ ಗಾರ್ಡನ್ ಪಾತಕ ಲೋಕಕ್ಕೆ ತಾನೇ ಬಾಸ್ ಎಂಬಂತೆ ಬಿಂಬಿಸಿಕೊಂಡಿದ್ದಳು. ಗಾರ್ಡನ್ ಮಣಿ ಅಲಿಯಾಸ್ ದಾಸನ ಹತ್ಯೆ ಆರೋಪ ಈಕೆಯ ಮೇಲಿದೆ. ಇನ್ನು ಚಪ್ಪಲಿ ಹೊಲೆಯುತ್ತಿದ್ದ ವ್ಯಕ್ತಿಯ ಕಾಲನ್ನೇ ತುಂಡರಿಸಿದ್ದ ಮಾಲಾ ಜೈಲಿಗೆ ಕೂಡ ಹೋಗಿದ್ದಳು. ಈಕೆಯ ವಿರುದ್ಧ ರೌಡಿ ಶೀಟರ್ ಖಾತೆ ತೆರೆಯಲಾಗಿದೆ. ಭಕ್ಷಿ ಗಾರ್ಡನ್ ಪಾತಕ ಲೋಕದ ಪುಟಗಳಲ್ಲಿ ಮಾಲಾ ತನ್ನದೇ ಆದ ಪುಡಿ ಗ್ಯಾಂಗ್ ಕಟ್ಟಿಕೊಂಡು ದಾದಾಗಿರಿ ಮಾಡುತ್ತಲೇ ಇದ್ದಳು. ಆರಂಭದಲ್ಲಿ ಸಹೋದರ ಕದಿರೇಶ್‌ಗೆ ಸಾಥ್ ನೀಡಿದ್ದ ಮಾಲಾ ಆಸ್ತಿ ಹಾಗೂ ಅಧಿಕಾರಕ್ಕಾಗಿ ಸಹೋದರನ ಪತ್ನಿಯ ಹತ್ಯೆ ಮಾಡಿಸಿದ್ದಾಳೆ. ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾಳೆ.

ರೇಖಾ ಆಸ್ತಿಗಾಗಿ ಮಾಲಾ ಸ್ಕೆಚ್:
ಕದಿರೇಶ್ ಹತ್ಯೆ ಬಳಿಕ ಜನ ಸೇವಾ ಕೆಲಸಗಳ ಮೂಲಕ ರೇಖಾ ದೊಡ್ಡ ಹೆಸರು ಮಾಡಿದ್ದಳು. ಸಹೋದರನ ಹತ್ಯೆ ಬಳಿಕ ರೇಖಾ ಕೈ ತಪ್ಪಿ ಹೋಗುತ್ತಿದ್ದಾಳೆ. ರವಿ ಎಂಬಾತನ ಜತೆ ಓಡಾಡುತ್ತಿದ್ದಾಳೆ. ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ರೇಖಾ ಹೀಗೆ ಇದ್ದರೆ ಭವಿಷ್ಯದಲ್ಲಿ ರಾಜಕೀಯ ಹಾಗೂ ಆಸ್ತಿ ಪಾಸ್ತಿ ಸಿಗಲ್ಲ ಎಂದು ಆಲೋಚಿಸಿದ್ದಳು. ಹೀಗಾಗಿ ರೇಖಾಳನ್ನು ಹತ್ಯೆ ಮಾಡುವಂತೆ ಪೀಟರ್‌ಗೆ ಪುಸಲಾಯಿಸಿದ್ದಳು. ರೇಖಾಳನ್ನು ಹತ್ಯೆ ಮಾಡಿದ ಬಳಿಕ ಏನು ಬೇಕು ಕೇಳು ಎಂದಿದ್ದಂತೆ ಮಾಲಾ. ಇದನ್ನೇ ನಂಬಿದ್ದ ಪೀಟರ್ ಮತ್ತು ಸೂರ್ಯ ಎಂಬ ಕಿರಾತಕರು ರೇಖಾ ಚಲನವಲನ ಗಮನಿಸುತ್ತಿದ್ದರು. ಮದ್ಯ ಮತ್ತು ಮೋಜಿಗೆ ಆಗುವಷ್ಟು ಹಣ ಕೊಡುತ್ತಿದ್ದ ಮಾಲಾ ಮಾತು ನಂಬಿ ಜೂ. 24 ರಂದು ರೇಖಾಳನ್ನು ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೀಟರ್, ಸೂರ್ಯ ಜತೆಗೆ ಮಾಲಾ ಹಾಗೂ ಪುತ್ರ ಅರುಳ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

ಮಗು ಚಿವುಟಿ ತೊಟ್ಟಿಲು ತೂಗುವ ಮಾಲ:
Recommended Video
ರೇಖಾ ಹತ್ಯೆ ಬಗ್ಗೆ ಗೊತ್ತಿದ್ದರೂ ಮಾಲಾ ಸುಮ್ಮನಾಗಿದ್ದಳು. ಘಟನಾ ಸ್ಥಳದಲ್ಲಿದ್ದರೂ ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಆ ಪೀಟರ್ ಕೊಲೆ ಮಾಡಿರಬೇಕು ಎಂದು ರಾಗ ತೆಗೆದಿದ್ದಳು. ಎಲ್ಲದರ ಮೇಲೆ ನಿಗಾ ಇಟ್ಟಿದ್ದ ತನಿಖಾ ತಂಡ ಮಾಲಾ ಹಾಗೂ ಆಕೆಯ ಪುತ್ರ ಅರುಳ್‌ನನ್ನು ವಿಚಾರಣೆಗೆ ಒಳಪಡಿಸಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ಅಸಲಿ ರಹಸ್ಯ ಬೆಳಕಿಗೆ ಬಂದಿದೆ. ರೇಖಾ ಹತ್ಯೆಗೆ ಮಾಲಾ ಸುಪಾರಿ ನೀಡಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ವೈದ್ಯಕೀಯ ಪರೀಕ್ಷೆ ನಡೆಸಿ ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಹದಿನಾಲ್ಕು ದಿನ ಪೊಲೀಸ್ ಕಸ್ಡಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications