ನಕಲಿ ಪರ್ಮಿಟ್ ಬಳಸಿ ಅದಿರು ಸಾಗಿಸುತ್ತಿದ್ದ ರೆಡ್ಡಿ

ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಜನಾರ್ದನ ರೆಡ್ಡಿ ನಡೆಸಿರುವ ಅಕ್ರಮಗಳು ಕುರಿತು ವಿವರ ನೀಡಲಾಗಿದೆ. ಮೂರು ಹಂತದಲ್ಲಿ ಅದಿರು ಸಾಗಣೆ ಮಾಡುವ ಜಾಲವನ್ನು ರೆಡ್ಡಿ ನಿರ್ವಹಿಸಿಸುತ್ತಿದ್ದರು. ಬೇಲೇಕೇರಿ ಬಂದರು ಮೂಲಕ ಅದಿರು ಸಾಗಣೆ ಮಾಡುತ್ತಿದ್ದರು.
ಆಂಧ್ರಪ್ರದೇಶ ರಾಜ್ಯದ ನಕಲಿ ಅದಿರು ಸಾಗಣೆ ಪರವಾನಗಿಯನ್ನು ತೋರಿಸಿ, ರೆಡ್ಡಿ ಬೇಲೇಕೇರಿ ಬಂದರಿನ ಮೂಲಕ ಅದಿರು ಸಾಗಣೆ ಮಾಡುತ್ತಿದ್ದರು ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ರೆಡ್ಡಿ ಆಂಧ್ರಪ್ರದೇಶದಲ್ಲೂ ತಮ್ಮ ಪ್ರಭಾವ ಹೊಂದಿದ್ದರು ಎಂಬುದು ಬಹಿರಂಗವಾಗಿದೆ.
ಜನಾರ್ದನ ರೆಡ್ಡಿ ಜೊತೆಗಿದ್ದ ಸ್ವಸ್ತಿಕ್ ನಾಗರಾಜ್, ಕಾರದಪುಡಿ ಮಹೇಶ್ ಮತ್ತು ರೆಡ್ಡಿ ಆಪ್ತ ಅಲಿಖಾನ್ ಈ ನಕಲಿ ಪರವಾನಗಿ ಪಡೆಯುವುದು ಮತ್ತು ಅದನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದರು ಎಂದು ವಿವರ ನೀಡಲಾಗಿದೆ.
ಹೀಗೆ ಆಂಧ್ರಪ್ರದೇಶದ ನಕಲಿ ಪರವಾನಗಿ ಬಳಸಿಕೊಂಡು ಬೇಲೇಕೇರಿ ಬಂದರಿನಿಂದ ರೆಡ್ಡಿಯ ಸೂಚನೆಯಂತೆ ಜನವರಿ 2009ರಿಂದ 2010ರ ಮೇ 31ರವರೆಗೆ ಅಕ್ರಮವಾಗಿ ಅದಿರು ಸಾಗಣೆ ಮಾಡಿದ್ದಾರೆ ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಶಾಫಿಯಾ ಮಿನರಲ್ಸ್, ಮಂಜುನಾಥೇಶ್ವರ ಮಿನರಲ್ಸ್ ಹೆಸರಿನಲ್ಲಿ ಈ ನಕಲಿ ಪರವಾನಗಿಗಳನ್ನು ತಯಾರು ಮಾಡಲಾಗಿತ್ತು. ರೆಡ್ಡಿ ಸಹಾಯಕರು, ಕೆಲಸಗಾರರು ಈ ಕಂಪನಿಗಳ ಮಾಲೀಕರಾಗಿದ್ದರು. ಹೀಗೆ ಅಕ್ರಮವಾಗಿ ಸಾಗಿಸಿದ ಅದಿರಿನ ಹಣ ರೆಡ್ಡಿ ಖಜಾನೆ ಸೇರುತ್ತಿತ್ತು.
ರೆಡ್ಡಿ ಮತ್ತು ಅಲಿಖಾನ್ ಸ್ಥಳೀಯ ಗಣಿ ಮಾಲೀಕರನ್ನು ಬೆದರಿಸಿ ಹಲವು ಗಣಿ ಗುತ್ತಿಗೆದಾರರಿಂದ ಬಲವಂತವಾಗಿ ಗಣಿಗಳನ್ನು ಉಪ ಗುತ್ತಿಗೆ ಪಡೆದಿದ್ದರು. ಕೆಲವು ಗಣಿ ಗುತ್ತಿಗೆಗಳಲ್ಲಿ ತೆಗೆಯುತ್ತಿದ್ದ ಅದಿರಿನಲ್ಲಿ ಶೇಕಡ 30ರಷ್ಟನ್ನು ಹಫ್ತಾ ರೂಪದಲ್ಲಿ ಸಂಗ್ರಹಿಸುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ನಕಲಿ ಪರವಾನಗಿ ತೋರಿಸಿ ಅದಿರು ಸಾಗಿಸುವುದನ್ನು ಪ್ರಶ್ನಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ರೆಡ್ಡಿ ಆಪ್ತ ಅಲಿಖಾನ್ ಬೆದರಿಕೆ ಹಾಕುತ್ತಿದ್ದರು. ಈ ಮೂಲಕ ತಮ್ಮ ವ್ಯವಹಾರಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತಿದ್ದರು ಎಂದು ಪಟ್ಟಿ ಹೇಳುತ್ತಿದೆ.












Click it and Unblock the Notifications