ರಕ್ತಚಂದನ ಮಾರ್ಗ : ಆಂಧ್ರದಿಂದ ಚೀನಾ ವಯಾ ಬೆಂಗಳೂರು
ಬೆಂಗಳೂರು, ಜೂ.15: ಆಂಧ್ರಪ್ರದೇಶದಿಂದ ಚೀನಾಕ್ಕೆ ರಕ್ತಚಂದನ ಕಳ್ಳಸಾಗಣಿಕೆ ನಡೆಸಲು ಕರ್ನಾಟಕದ ರಾಜಧಾನಿ ಬೆಂಗಳೂರು ಮಾರ್ಗ ಒದಗಿಸಿದೆ ಎಂಬ ಸತ್ಯ ಇತ್ತೀಚೆಗೆ ಬೆಳಕಿಗೆ ಬಂದಿದೆ. ರಕ್ತಚಂದನ ಸ್ಮಗಲಿಂಗ್ ಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಇಬ್ಬರು ಚೀನಿಯರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಈ ವಿಷಯ ತಿಳಿದು ಬಂದಿದೆ.
ಕಳೆದ ನಾಲ್ಕು ತಿಂಗಳಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಬಂಧನ ಇದಾಗಿದೆ. ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಗಂಧದ ಮರದ ತುಂಡುಗಳು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಸಮೀಪದ ಸಾಮಿಲ್ ಗಳಿಗೆ ಇದನ್ನು ಸಾಗಿಸಲಾಗುತ್ತಿತ್ತು ಹಾಗೂ ಅಲ್ಲಿಂದ ಸ್ಮಗ್ಲರ್ ಗಳು ರಾತ್ರೋರಾತ್ರಿ ಹೊತ್ತು ಚೀನಾಗೆ ರವಾನಿಸುತ್ತಿದ್ದರು ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ. [ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]
ಪೀಠೋಪಕರಣ ಮಾಡಿ ಸ್ಮಗಲಿಂಗ್
ವಿಚಾರಣೆ ಸಂದರ್ಭದಲ್ಲಿ ಗಂಧದ ಮರ ಹಾಗೂ ರಕ್ತಚಂದನದ ತುಂಡುಗಳನ್ನು ಪೀಠೋಪಕರಣಗಳಲ್ಲಿ ಸೇರಿಸಿ ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಆಂಧ್ರದ ರಕ್ತಚಂದನ ಬೆಂಗಳೂರಿಗೆ ತಂದು ಅಲ್ಲಿಂದ ಸಾಮಿಲ್ ಗಳಲ್ಲಿ ಇತರೆ ಮರದ ದಿಮ್ಮಿ, ತುಂಡುಗಳ ಜೊತೆ ರಾಶಿ ಹಾಕಲಾಗುತ್ತಿತ್ತು.
ನಂತರ ಪೀಠೋಪಕರಣ ತಯಾರಿಯಲ್ಲಿ ಬಳಕೆ ಮಾಡಿ, ಟೇಬಲ್, ಕುರ್ಚಿ, ವಿನ್ಯಾಸಯುಕ್ತ ಬೀಡ್ ಗಳಾಗಿ ಪರಿವರ್ತಿಸಿ ಕೊಂಡೊಯ್ಯಲಾಗುತ್ತಿತ್ತು. ರಕ್ತಚಂದನಕ್ಕೆ ಬೇರೆ ರೂಪ, ವಿನ್ಯಾಸ ನೀಡಿ ದೇಶದಿಂದ ಹೊರಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. [ರಕ್ತಚಂದನ ಪ್ರಕರಣ: ನಾಪತ್ತೆಯಾಗಿದ್ದ ನಟಿ ನೀತು ಬಂಧನ]
ಚೀನಿ ವಿದ್ಯಾರ್ಥಿಗಳ ಬಳಕೆ
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ಮೂಲದ ವಿದ್ಯಾರ್ಥಿಗಳನ್ನು ರಕ್ತಚಂದನ ಸ್ಮಗಲಿಂಗ್ ಗೆ ಬಳಸಿಕೊಳ್ಳಲಾಗುತ್ತಿದೆ. ಚೀನಿಯರ ಪಾಲಿಗೆ ರಕ್ತಚಂದನ ವ್ಯಾಪಾರದ ವಸ್ತುವಷ್ಟೇ ಅಲ್ಲ ಪವಿತ್ರವಾದ ಮರ ಎನಿಸಿದೆ. ಭಾರತದಿಂದ ಚೀನಾಕ್ಕೆ ರಕ್ತಚಂದನ ರವಾನೆ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ ದೇಶದ ಇತರೆ ಭಾಗಗಳಿಗೆ ಸ್ಮಗಲಿಂಗ್ ಮಾಡಲಾಗುತ್ತಿತ್ತು.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ನಂತರ ಚೀನಾಕ್ಕೆ ಸಾಗಿಸುವ ತನಕ ಅನೇಕ ಕೈ ಬದಲಾಗುತ್ತದೆ. ಅನೇಕ ಅಧಿಕಾರಿಗಳು, ಸ್ಥಳೀಯ ಮಾಫಿಯಾ ಕೂಡಾ ಇದರಲ್ಲಿ ತುಂಡು ಗುತ್ತಿಗೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಈ ನಡುವೆ ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಹತ್ಯೆ ಆರೋಪದ ಮೇಲೆ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಿ, ಎಫ್ ಐಆರ್ ಹಾಕಿ ತನಿಖೆ ಕೈಗೊಳ್ಳಲಾಗಿದೆ ಎಂದು ಚಿತ್ತೂರು ಪೊಲೀಸರು ಆಂಧ್ರಪ್ರದೇಶ ಹೈಕೋರ್ಟಿಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. (ಇಂಗ್ಲೀಷ್ ಮೂಲ: ವಿಕಾಸ್ ನಂಜಪ್ಪ)