ಮೂರು ಕಷ್ಟಕರ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಗೆಲ್ಲಿಸಲು ಸಿದ್ಧ : ವಿ. ಸೋಮಣ್ಣ
ಲೋಕಸಭಾ ಚುನಾವಣೆ ಸಮೀಪವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಈಗಾಗಲೇ ಚುನಾವಣಾ ಸಿದ್ಧತೆ ಆರಂಭಿಸಿದೆ. ಸಂಘಟನೆಗೆ ತಳಮಟ್ಟದಿಂದ ಪ್ರಯತ್ನಗಳು ಆರಂಭವಾಗಿದ್ದು, ನಾಯಕರಿಗೆ ಜವಾಬ್ದಾರಿಗಳನ್ನು ವಹಿಸಲಾಗುತ್ತಿದೆ. ಮಾಜಿ ಸಚಿವ ವಿ. ಸೋಮಣ್ಣ ಕೂಡ ತಮಗೆ ಮೂರು ಕ್ಷೇತ್ರಗಳ ಉಸ್ತುವಾರಿ ವಹಿಸುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಗೆಲ್ಲುವುದು ಕಷ್ಟ ಎನಿಸುವಂತ ಮೂರು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ತಮಗೆ ವಹಿಸಬೇಕು ಎಂದು ಮಾಜಿ ಸಚಿವ ವಿ. ಸೋಮಣ್ಣ ಪಕ್ಷದ ವರಿಷ್ಠರನ್ನು ಕೋರಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು ಇತ್ತೀಚಿನ ನವದೆಹಲಿ ಭೇಟಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ರಾಜ್ಯಸಭೆಯಲ್ಲಿ ತಮಗೆ ಅವಕಾಶ ಕಲ್ಪಿಸುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ರಾಜ್ಯಸಭೆಗೆ ಸ್ಪರ್ಧೆ ಮಾಡುವ ಮೂಲಕ ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎನ್ನುವ ಸಂದೇಶವನ್ನು ನೀಡಿದ್ದಾರೆ. ಸೋಮಣ್ಣ ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿದ್ದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.
"ನಾನು ನವದೆಹಲಿಯಲ್ಲಿ ಬಿಜೆಪಿಯ ಪ್ರತಿ ಹಿರಿಯ ನಾಯಕರ ಜೊತೆ ಕೇವಲ 5 ನಿಮಿಷಗಳ ಅಪಾಯಿಂಟ್‌ಮೆಂಟ್ ಕೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ನನ್ನ ಮಾತುಗಳನ್ನು ಚೆನ್ನಾಗಿ ಕೇಳಿದರು, ಅದು ಸ್ವತಃ ದೊಡ್ಡ ಸಮಾಧಾನವಾಗಿದೆ." ಎಂದು ಸೋಮಣ್ಣ ಹೇಳಿದರು.
ಒಳ್ಳೆಯತನಕ್ಕೆ ಎಂದಿಗೂ ಬೆಲೆ ಇರುತ್ತದೆ. ಅಮಿತ್ ಶಾ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಮುಂದೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವ ನಂಬಿಕೆ ಇದೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸೋಮಣ್ಣ ಬಗ್ಗೆ ಬಿವೈ ವಿಜಯೇಂದ್ರ ಹೇಳಿದ್ದೇನು?
ಸುದ್ದಿಗಾರರ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, "ಸೋಮಣ್ಣ ಅವರ ಸ್ಪರ್ಧೆಗೆ ನಮ್ಮಅಭ್ಯಂತರವಿಲ್ಲ ಎಂದಿದ್ದಾರೆ. ಸೋಮಣ್ಣ ಪಕ್ಷದ ಹಿರಿಯ ನಾಯಕ, ಪಕ್ಷಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರು ಎರಡೂ ಕ್ಷೇತ್ರಗಳಲ್ಲಿ ಸೋತಿದ್ದು ನೋವು ತಂದಿದೆ. ವರಿಷ್ಠರ ಮುಂದೆ ಅವರ ರಾಜ್ಯಸಭೆ ಸ್ಪರ್ಧೆ ಬಗ್ಗೆ ಮಾತನಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಕೂಡ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ" ಎಂದಿದ್ದಾರೆ.
ತುಮಕೂರಿನಿಂದ ಸ್ಪರ್ಧಿಸಲು ಮನವಿ
ತುಮಕೂರು ಬಿಜೆಪಿ ಸಂಸದ ಜಿಎಸ್ ಬಸವರಾಜು, ವಿ ಸೋಮಣ್ಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ್ದರು. ವಿ. ಸೋಮಣ್ಣ ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಬಿಜೆಪಿ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.












Click it and Unblock the Notifications