ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಸಸ್ಪೆಂಡ್
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ದುರಂತದ ಹಿನ್ನೆಲೆ ರಾಜ್ಯ ಸರ್ಕಾರದ ಮೇಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಮೊದಲಿಗೆ ಹೊಣೆ ಹೊತ್ತುಕೊಳ್ಳದ ಸರ್ಕಾರವು ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್, ಎಸಿಪಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್ಚಾರ್ಜ್ ಅವರನ್ನು ಕೂಡ ತಕ್ಷಣದಿಂದಲೇ ಅಮಾನತು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಈ ಘಟನೆಗೆ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಹೊಣೆ ಮಾಡಿದೆ.

ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಇದರ ತನಿಖೆಯನ್ನು ಸಿಐಡಿಗೆ ನೀಡಿದೆ. ಎಫ್‌ಐಆರ್ ಆಧಾರದ ಮೇಲೆ ಸಿಐಡಿ ಈ ಕೇಸ್ ತನಿಖೆ ನಡೆಸಲಿದೆ. 30 ದಿನಗಳಲ್ಲಿ ತನಿಖೆ ಮುಗಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ
ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖಂಡಿಸಿದ್ದಾರೆ. ಇದನ್ನು ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ಎಂದು ಟೀಕಿಸಿದ್ದಾರೆ. ಆರ್‌ಸಿಬಿ ವಿಜಯೋತ್ಸವದ ಹೆಸರಿನಲ್ಲಿ ಲಾಭ ಪಡೆಯುವ ಕೆಟ್ಟ ಸ್ವಾರ್ಥದ ಫಲವಾಗಿ 11 ಅಮಾಯಕ ಜೀವಗಳ ಬಲಿಯಾಗಿದೆ. ಸಾವಿರಾರು ಜನರು ಸಂಕಟ ಅನುಭವಿಸಿದ್ದಾರೆ. ಇಂದು ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಗಣಿಸಿ ಇಂದೇ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವ ಪರಮೇಶ್ವರ್ ಅವರು 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼ ಎಂಬಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಇತರ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಸರ್ಕಾರದ ನಿರ್ಲಜ್ಜ ಹಾಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಾಲೋಚನೆಯ ಕ್ರಮ ಎಂದು ಖಂಡಿಸಿದ್ದಾರೆ.
ಕರ್ನಾಟಕದ ಜನತೆ ಮಮ್ಮಲ ಮರುಗುತ್ತಿದ್ದಾರೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ಮನೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾನವೀಯತೆ ಇರುವವರ ಕರುಳು ಹಿಂಡುತ್ತಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನಿನ್ನೆಯ ಘಟನೆ ಬಹುದೊಡ್ಡ ದುರಂತವಾಗಿ ದಾಖಲಾಗಿದೆ. ಯಾವುದೇ ಮಾನದಂಡವಿಲ್ಲದೆ ರಾಷ್ಟ್ರೀಯ ಅಥವಾ ರಾಜ್ಯದ ಮಹತ್ವದ ಹಿನ್ನೆಲೆಯಿಲ್ಲದೇ ವಿವೇಚನಾರಹಿತವಾಗಿ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂದರ್ಭದ ಲಾಭ ಪಡೆಯಬಹುದು ಎಂಬ ದುರಾಸೆಯಿಂದ ರಾಜಧಾನಿಯ ಹೃದಯ ಭಾಗವನ್ನು ಸ್ಮಶಾನವನ್ನಾಗಿಸಿ ಸಂಭ್ರಮಾಚರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಇಂದು ಕರ್ನಾಟಕದ ಜನತೆ ದಿನವಿಡೀ ಶಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಸಂದರ್ಭದಲ್ಲಿ ನೈತಿಕತೆ ಮೆರೆದು ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಾದ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ ಹಾಗೂ ಗೃಹಸಚಿವರು ಪೊಲೀಸ್ ಅಧಿಕಾರಿಗಳ ತಲೆದಂಡ ಪಡೆದುಕೊಂಡಿರುವುದು ನಿಜಕ್ಕೂ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ. ಯಾರು ಸತ್ತರೇನು? ಯಾರು ನೊಂದರೇನು? ನಾವು ಮಾತ್ರ ಅಧಿಕಾರದಲ್ಲಿರಬೇಕೆಂಬ ಭಂಡತನಕ್ಕೆ ಅಂಟಿ ಕುಳಿತಿರುವ ಕಾಂಗ್ರೆಸ್ ಸರ್ಕಾರವನ್ನು ಇತಿಹಾಸಕ್ಕೆ ಕಪ್ಪು ಚುಕ್ಕಿ ಅಂಟಿಸಿದ ಕಾರಣಕ್ಕೆ ಜನರೇ ಕಿತ್ತೊಗೆಯುವ ಅನಿವಾರ್ಯ ಸಂದರ್ಭ ಸಮೀಪಿಸುತ್ತಿದೆ. ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ" ತಪ್ಪಿಸಿಕೊಳ್ಳಲಾಗದು. ತಕ್ಷಣವೇ ಮೂವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತಮ್ಮ ಗೌರವ ಕಾಪಾಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
-
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
RCB Vs LSG: ಬೆಂಗಳೂರಿನಲ್ಲಿ ಆರ್‌ಸಿಬಿ-ಎಲ್ಎಸ್ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB Playing 11 Prediction: ಎಲ್ಎಸ್ಜಿ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications