ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರಂತಕ್ಕೆ ಇದೇ ಕಾರಣ!
ಬೆಂಗಳೂರಿನ ತಂಡಕ್ಕೆ ಹಾಗೂ ಐಪಿಎಲ್‌ಗೆ ಬುಧವಾರ ನಡೆದ ಘಟನೆಯು ಕಪ್ಪುಚುಕ್ಕಿ ಅಂತಲೇ ಹೇಳಲಾಗುತ್ತಿದೆ. ಸುದೀರ್ಘ 18 ವರ್ಷಗಳಿಂದ ಕಾದಿದ್ದ ಅಭಿಮಾನಿಗಳು ಒಂದು ದಿನದಲ್ಲಿ ತಾಳ್ಮೆ ಕಳೆದುಕೊಂಡರೆ ಎನ್ನುವ ಪ್ರಶ್ನೆ ಎದುರಾಗಿದೆ. ಆರ್‌ಸಿಬಿ ತಂಡವು ಬೆಂಗಳೂರಿಗೆ ಆಗಮಿಸುತ್ತಿದೆ ಎನ್ನುವ ವಿಷಯವು ಖಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಜನ ಸೇರಿದ್ದರು. ಸಾವಿರಾರು ಜನ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕೆ ಬೆಂಗಳೂರಿನ ಪೊಲೀಸರು ಪರದಾಡಿದರು. ಇತ್ತೀಚಿನ ಅಪ್ಡೇಟ್ಸ್‌ನ ಪ್ರಕಾರ, 10 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಹೌದು ಆರ್‌ಸಿಬಿಗೆ ಅಪಾರ ಅಭಿಮಾನಿ ಬಳಗವಿದೆ. ಲಕ್ಷಾಂತರ ಜನ ಸಂಭ್ರಮಾಚರಣೆಗೆ ಸೇರುತ್ತಾರೆ ಎನ್ನುವ ಅಂದಾಜಿದ್ದರೂ ಕರ್ನಾಟಕ ಸರ್ಕಾರ ಹಾಗೂ ಪೊಲೀಸರು ಯಾವುದೇ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ.

ಜನಾಕ್ರೋಶ: ಇನ್ನು ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರವು ಯಾವುದೇ ಮುಂದಾಲೋಚನೆ ಅಥವಾ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳದೆ ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಆರ್‌ಸಿಬಿಯ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಲಿದ್ದಾರೆ ಎನ್ನುವ ಮುನ್ಸೂಚನೆ ಇದ್ದರೂ ಗೆದ್ದ ಬೆನ್ನಲ್ಲೇ ಈ ರೀತಿಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಬಾರದಿತ್ತು. ಇದಕ್ಕೆ ಇನ್ನಷ್ಟು ಪೂರ್ವ ಸಿದ್ಧತೆಗಳನ್ನು ರಾಜ್ಯ ಸರ್ಕಾರವು ಮಾಡಿಕೊಳ್ಳಬೇಕಿತ್ತು ಎನ್ನುವ ಆಗ್ರಹ ಕೇಳಿ ಬಂದಿದೆ.
ಇದಕ್ಕೆಲ್ಲವೂ ರಾಜ್ಯ ಸರ್ಕಾರವೇ ಕಾರಣ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ದೊಡ್ಡ ದೊಡ್ಡ ಸಮಾವೇಶಗಳಲ್ಲಿ ಜನ ಯಾವ ರೀತಿ ಸೇರುತ್ತಾರೆ ಎನ್ನುವುದು ತಿಳಿದಿದ್ದರೂ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲುನಿಂದ ಉಂಟಾದ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧರ ಜೀವ ನಷ್ಟವಾಗಿರುವುದು ನನಗೆ ಅತೀವ ದುಃಖ ತಂದಿದೆ. ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ, ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದೇ ಈ ಮಹಾದುರಂತಕ್ಕೆ ನೇರ ಕಾರಣ. ದುರಂತದ ಹೊಣೆಯನ್ನು ರಾಜ್ಯ @INCKarnataka ಸರಕಾರವೇ ಹೊತ್ತುಕೊಳ್ಳಬೇಕು.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರ ಜತೆಗೆ ಮೃತರ ಕುಟುಂಬಗಳ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು. ಕ್ರೀಡಾಂಗಣ ಹಾಗೂ ವಿಧಾನಸೌಧದ ಬಳಿ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಕ್ರಿಕೆಟ್ ಪ್ರೇಮಿಗಳು ಗಾಬರಿ, ಆತುರಕ್ಕೆ ಒಳಗಾಗದೆ ಕ್ಷೇಮವಾಗಿ ಮನೆ ತಲುಪಬೇಕು ಎಂಬುದು ನನ್ನ ಕಳಕಳಿ. ಪೊಲೀಸರು ಈ ನಿಟ್ಟಿನಲ್ಲಿ ತುರ್ತುಕ್ರಮ ವಹಿಸಿ ಜನರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು, ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸದ ಅಭಿನಂದನಾ ಸಮಾರಂಭದ ವೇಳೆ ಕಾಲ್ತುಳಿತದಿಂದ 11 ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಬೇಸರವಾಯಿತು.
ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿವೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಆತುರ, ಸೂಕ್ತ ಭದ್ರತೆ ಕೈಗೊಂಡು, ಒಂದು ದಿನ ತಡವಾಗಿಯೇ ಕಾರ್ಯಕ್ರಮ ಆಯೋಜಿಸಬಹುದಿತ್ತು. ಈ ದಿನ ನಾವೆಲ್ಲರೂ ಸಂಭ್ರಮ ಕ್ಷಣದಲ್ಲಿರುವಾಗ, ಸಂಭ್ರಮದ ಬದಲಾಗಿ ಸೂತಕದ ಛಾಯೆ ಆವರಿಸಿದೆ. ಈ ಸಾವುಗಳಿಗೆ ಹೊಣೆ ಯಾರು.?
ಕೂಡಲೆ ಮೃತ ಅಭಿಮಾನಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸುತ್ತದೆ. ಅಭಿಮಾನಿಗಳಿಗೆ ನನ್ನದೊಂದು ಮನವಿ ಸುರಕ್ಷಿತವಾಗಿ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ ಎಂದು ಹೇಳಿದ್ದಾರೆ.












Click it and Unblock the Notifications