Rameshwaram Cafe: ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ, ಸಂಸ್ಥಾಪಕರು ಹೇಳಿದ್ದೇನು?
ಬೆಂಗಳೂರು, ಮೇ. 24: ರಾಜಧಾನಿಯ ಪ್ರಸಿದ್ಧ ಉಪಹಾರ ಕೇಂದ್ರಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯ ಹೈದರಾಬಾದ್ ಔಟ್‌ಲೆಟ್ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಲವಾರು ಆಹಾರ ಸುರಕ್ಷತಾ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿತ್ತು. ಇದಕ್ಕೆ ರಾಮೇಶ್ವರಂ ಕೆಫೆ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮ ಹೈದರಾಬಾದ್ ಔಟ್ಲೆಟ್‌ನಲ್ಲಿ ಅಧಿಕಾರಿಗಳು ಮಾಡಿದ ಅವಲೋಕನಗಳನ್ನು ನಾವು ಗಮನಿಸಿದ್ದೇವೆ. ಸೇವೆ ಮತ್ತು ನೈರ್ಮಲ್ಯದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಗ್ರಾಹಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ನಾವು ಭರವಸೆ ನೀಡುತ್ತೇವೆ. ನಾವು ಈಗಾಗಲೇ ವಿಷಯವನ್ನು ಪರಿಶೀಲಿಸುತ್ತಿದ್ದೇವೆ" ಎಂದಿದ್ದಾರೆ.

ಆಂತರಿಕ ತನಿಖೆಗೆ ಆದೇಶ
"ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಲು ಮತ್ತು ಪ್ರತಿ ಔಟ್ಲೆಟ್ ಸ್ಟಾಕ್ ಪರೀಕ್ಷಿಸಲು ನಾವು ಆಂತರಿಕ ತನಿಖೆಗೆ ಆದೇಶಿಸಿದ್ದೇವೆ. ಈ ವಿಷಯದಲ್ಲಿ ನಾವು ಅಧಿಕಾರಿಗಳಿಗೆ ಎಲ್ಲಾ ಸಹಕಾರವನ್ನು ನೀಡುತ್ತೇವೆ. ನಮ್ಮ ಹೈದರಾಬಾದ್ ಔಟ್‌ಲೆಟ್‌ನಲ್ಲಿ ಮಾತ್ರ ನಮಗೆ ವಾರಕ್ಕೆ 500 ಕೆಜಿಗೂ ಹೆಚ್ಚು ಉದ್ದಿನಬೇಳೆ, ಪ್ರತಿದಿನ 300 ಲೀಟರ್ ಹಾಲು ಮತ್ತು ದಿನಕ್ಕೆ 80 ರಿಂದ 100 ಲೀಟರ್ ಮೊಸರು ಬೇಕಾಗುತ್ತದೆ. ಪತ್ತೆಯಾದ ಸ್ಟಾಕ್‌ಗಳನ್ನು ಸೀಜ್ ಮಾಡಲಾಗಿತ್ತು. ಇವುಗಳನ್ನು ಬಳಕೆಗಾಗಿ ಇಟ್ಟಿರಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
"ನಾವು ಎಲ್ಲಾ ಕಾನೂನುಗಳನ್ನು ಅನುಸರಿಸುತ್ತೇವೆ.ಉತ್ತಮ ಮಾರಾಟಗಾರರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇವೆ. ಲೇಬಲ್ ಮಾಡದ ಉತ್ಪನ್ನಗಳ ಬಳಕೆಯನ್ನು ಕಾನೂನು ನಿಷೇಧಿಸಿಲ್ಲ. ನಾವು ಅತ್ಯುನ್ನತ ನೈರ್ಮಲ್ಯ ಮಾನದಂಡಗಳನ್ನು ಅಳವಡಿಸಿಕೊಂಡಿದ್ದೇವೆ" ಎಂದಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಜಿರಳೆಗಳು ಕಂಡು ಬಂದಿಲ್ಲ
"ನಮ್ಮ ಅಡುಗೆಮನೆಯಲ್ಲಿ ಜಿರಳೆಗಳು ಕಂಡುಬಂದಿವೆ ಎಂದು ಕೆಲವು ವರದಿಗಳು ತಪ್ಪಾಗಿ ಹೇಳಿವೆ. ಅಧಿಕೃತ ವರದಿಯು ಇದನ್ನು ಉಲ್ಲೇಖಿಸುವುದಿಲ್ಲ. ವಾಸ್ತವವಾಗಿ, ಜಿರಳೆಗಳು ಬೇರೆ ರೆಸ್ಟೋರೆಂಟ್‌ನಲ್ಲಿ ಕಂಡುಬಂದಿವೆ. ರಾಮೇಶ್ವರಂ ಕೆಫೆಯಲ್ಲಿ ಅಲ್ಲ. ನಮ್ಮ ಕೆಫೆಯಲ್ಲಿ ಗುಣಮಟ್ಟವನ್ನು ಕಾಪಾಡಲು ಪ್ರತಿದಿನ ಡೀಪ್ ಕ್ಲೀನಿಂಗ್ ಇರುತ್ತದೆ" ಎಂದು ತಿಳಿಸಿದ್ದಾರೆ.

"ಇನ್ನು, ನಾವು ಅಧಿಕಾರಿಗಳಿಂದ ಯಾವುದೇ ಶೋಕಾಸ್ ನೋಟಿಸ್ ಸ್ವೀಕರಿಸಿಲ್ಲ. ಅವರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ಒತ್ತಿ ಹೇಳುತ್ತೇವೆ. ರಾಜ್ಯಗಳಾದ್ಯಂತ ನಮ್ಮ ಎಲ್ಲಾ ಔಟ್‌ಲೆಟ್‌ಗಳಲ್ಲಿ ನೈರ್ಮಲ್ಯ ತಪಾಸಣೆಗಾಗಿ ಆದೇಶಿಸಿದ್ದೇವೆ. ನಮ್ಮ ಗ್ರಾಹಕರ ಮನಸ್ಸು ಗೆಲ್ಲಲು ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆ ನೀಡುವುದು ಮುಖ್ಯ ಎಂದು ನಾವು ಯಾವಾಗಲೂ ನಂಬಿದ್ದೇವೆ" ಎಂದು ರಾಮೇಶ್ವರಂ ಕೆಫೆಯ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮುಗಿದ 16,000 ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅಡುಗೆಮನೆಯಲ್ಲಿ ಕಂಡುಬಂದಿದೆ. ಸರಿಯಾಗಿ ಲೇಬಲ್ ಮಾಡಿದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಅಲಸಂದೆ ಮತ್ತು 300 ಕೆಜಿ ಬೆಲ್ಲವನ್ನು ಸಹ ಕೆಫೆಯಿಂದ ವಶಪಡಿಸಿಕೊಳ್ಳಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಡಸ್ಟ್‌ಬಿನ್‌ಗಳನ್ನು ಮುಚ್ಚಳದಿಂದ ಮುಚ್ಚಿಲ್ಲ ಎಂದು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.












Click it and Unblock the Notifications