Rameshwaram Cafe: ಬೆಂಗಳೂರಿನಲ್ಲಿದೆ ವಿಶ್ವದ ಅತಿದೊಡ್ಡ ಕೆಫೆ: ಬೊಮ್ಮಸಂದ್ರದ ರಾಮೇಶ್ವರಂ ಕೆಫೆಯ ವಿಶೇಷತೆಗಳೇನು?
Bengaluru Rameshwaram Cafe: ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆ ಈಗ ಕೇವಲ ರುಚಿಕರ ಅಡುಗೆಗಳಿಂದ ಮಾತ್ರವಲ್ಲದೆ, ತನ್ನ ಬೃಹತ್ ವಿಸ್ತೀರ್ಣದ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ನಗರದ ಬೊಮ್ಮಸಂದ್ರದಲ್ಲಿ ಆರಂಭವಾಗಿರುವ ಇದರ ಹೊಸ ಶಾಖೆಯು ಕೇವಲ ಒಂದು ಹೋಟೆಲ್‌ವಾಗಿ ಉಳಿಯದೆ, ಒಂದು ಪ್ರೇಕ್ಷಣೀಯ ಸ್ಥಳದಂತೆ ವಿನ್ಯಾಸಗೊಂಡಿದೆ. ಹಾಗಾದ್ರೆ, ಇದರ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಮೇಶ್ವರಂ ಕೆಫೆ ಕೇವಲ ರುಚಿಕರ ಆಹಾರ ಮಾತ್ರವಲ್ಲದೆ, ಇಲ್ಲಿನ ಸೌಲಭ್ಯಗಳು ಮತ್ತು ವಿಶಾಲವಾದ ಆವರಣವು ಜನರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಜನಸಂದಣಿಯನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಕೆಫೆಯು ಬೊಮ್ಮಸಂದ್ರದಲ್ಲಿ ನಿರ್ಮಾಣವಾಗಿದ್ದು, ಇದು ದೊಡ್ಡ ಪಾರ್ಕಿಂಗ್ ವ್ಯವಸ್ಥೆ, ಅತ್ಯಾಧುನಿಕ ಅಡುಗೆ ಮನೆ ಮತ್ತು ಸುಂದರವಾದ ಲೇಔಟ್ ಹೊಂದಿದೆ. ಇದು ವಾರಾಂತ್ಯದ ಸಮಯದಲ್ಲಿ ಆಹಾರ ಪ್ರಿಯರಿಗೆ ಒಂದು ಪ್ರಮುಖ ತಾಣವಾಗುವುದರಲ್ಲಿ ಸಂಶಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೊಸ ಕೆಫೆಯ ವಿಸ್ತೀರ್ಣ
ಈ ಕೆಫೆಯು ಬರೋಬ್ಬರಿ 1.5 ಎಕರೆ (90,000 ಚದರ ಅಡಿ) ವಿಸ್ತೀರ್ಣ ಹೊಂದಿದೆ. ಇದನ್ನು ವಿಶ್ವದ ಅತಿದೊಡ್ಡ ರೆಸ್ಟೋರೆಂಟ್ ಕೆಫೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೇವಲ ಗಾತ್ರದಲ್ಲಿ ಮಾತ್ರವಲ್ಲದೆ, ಇಲ್ಲಿನ ಪ್ರತಿಯೊಂದು ಮೂಲೆಯೂ ವಿಶೇಷ ಕಲಾಕೃತಿಯಂತೆ ವಿನ್ಯಾಸಗೊಂಡಿರುವುದು ವಿಶೇಷವಾಗಿದೆ.
ಕೆಫೆಯ ವಿಶೇಷತೆಗಳು
ಈ ಕೆಫೆಯ ವಿನ್ಯಾಸವು ದಕ್ಷಿಣ ಭಾರತದ ಭವ್ಯ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಬೃಹತ್ ಕಂಬಗಳು ಮತ್ತು ಕೆತ್ತನೆಗಳು ಭೇಟಿ ನೀಡುವವರಿಗೆ ಸಾಂಪ್ರದಾಯಿಕ ಅನುಭವ ನೀಡುತ್ತವೆ. ಎಲ್ಲದಕ್ಕಿಂತ ಮುಖ್ಯವಾಗಿ ಇಲ್ಲಿ ಪ್ರತಿಷ್ಠಾಪಿಸಲಾಗಿರುವ 'ಆದಿಯೋಗಿ ಶಿವನ ಪ್ರತಿಮೆ' ಗ್ರಾಹಕರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ. ಇದು ಕೆಫೆಗೆ ಕೇವಲ ಆಹಾರ ಸೇವಿಸುವ ತಾಣವಲ್ಲದೆ, ಒಂದು ಪ್ರವಾಸಿ ತಾಣದ ಕಳೆ ನೀಡಿದೆ.
ವಿಶೇಷತೆ ಮತ್ತು ಸೌಲಭ್ಯಗಳು
* ಈ ಕೆಫೆಯ ವಿನ್ಯಾಸವು ಕೇವಲ ಆಧುನಿಕವಾಗಿರದೆ, ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುವಂತಿದೆ. ಕೆಫೆಯ ಪ್ರವೇಶ ದ್ವಾರ ಮತ್ತು ಒಳಾಂಗಣ ವಿನ್ಯಾಸವು ದಕ್ಷಿಣ ಭಾರತದ ಪುರಾತನ ದೇವಾಲಯಗಳ ವಾಸ್ತುಶಿಲ್ಪವನ್ನು ನೆನಪಿಸುತ್ತದೆ.
* ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಬೃಹತ್ 'ಆದಿಯೋಗಿ' ಶಿವನ ಪ್ರತಿಮೆ. ಇದು ಕೆಫೆಗೆ ಭೇಟಿ ನೀಡುವವರಿಗೆ ಪ್ರಮುಖ ಆಕರ್ಷಣೆಯಾಗಿದೆ.
ಪಾರ್ಕಿಂಗ್ ವ್ಯವಸ್ಥೆ: ಈ ವಿಶಾಲವಾದ ಜಾಗದಲ್ಲಿ ಏಕಕಾಲಕ್ಕೆ ನೂರಾರು ಜನರು ಕುಳಿತು ಆಹಾರ ಸವಿಯಬಹುದು. ಇನ್ನೂ ಬೆಂಗಳೂರಿನ ಹೋಟೆಲ್‌ಗಳಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆ ಆಗಿರುತ್ತದೆ. ಆದರೆ, ಇಲ್ಲಿ ಸಾವಿರಾರು ವಾಹನಗಳಿಗೆ ಆಗುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ರುಚಿಯಲ್ಲಿ ಬದಲಾವಣೆ ಇಲ್ಲ: ಕೆಫೆ ಎಷ್ಟೇ ದೊಡ್ಡದಾದರೂ, ರಾಮೇಶ್ವರಂ ಕೆಫೆಯ ಸಾಂಪ್ರದಾಯಿಕ ತುಪ್ಪದ ದೋಸೆ, ಇಡ್ಲಿ ಮತ್ತು ಫಿಲ್ಟರ್ ಕಾಫಿಯ ರುಚಿ ಇಲ್ಲಿಯೂ ಮುಂದುವರಿದಿದೆ.
ಮಾಲೀಕ ರಾಘವೇಂದ್ರ ರಾವ್ ಹೇಳುವುದೇನು?
ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ ಅವರು ಈ ಬೃಹತ್ ಯೋಜನೆಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. "ಸಂಸ್ಕೃತಿ, ನಂಬಿಕೆ ಮತ್ತು ಆಹಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಸಿಗುವಂತಹ ಜಾಗವನ್ನು ನಿರ್ಮಿಸುವುದು ನಮ್ಮ ಗುರಿಯಾಗಿತ್ತು," ಎಂದು ಹೇಳಿದ್ದಾರೆ ಅಂತಾ ವರದಿಯಾಗಿದೆ.
ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ದಂಪತಿಗಳ ಈ ಮಹತ್ವಾಕಾಂಕ್ಷೆಯ ಯೋಜನೆಯು ಬೆಂಗಳೂರಿನ ಆಹಾರೋದ್ಯಮಕ್ಕೆ ಹೊಸ ಆಯಾಮ ನೀಡಿದೆ. ಕೇವಲ ವ್ಯಾಪಾರವನ್ನಷ್ಟೇ ಗಮನದಲ್ಲಿಟ್ಟುಕೊಳ್ಳದೆ, ನಮ್ಮ ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಕೆಫೆಯ ಮೂಲಕ ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಬೆಂಗಳೂರಿನ ಹೊರವಲಯದ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಈ ಕೆಫೆ, ಈಗ ಇಡೀ ನಗರದ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.












Click it and Unblock the Notifications