Rameshwaram Cafe blast: ಮತ್ತೊಂದು ಸ್ಫೋಟಕ ಮಾಹಿತಿ ಬಯಲು.!-ಏನದು?
ಬೆಂಗಳೂರು, ಏಪ್ರಿಲ್, 12: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದ್ದು, ಎನ್‌ಐಎ ಆರೋಪಿಗಳ ಶೋಧ ಕಾರ್ಯಕ್ಕೆ ಇಳಿದಿತ್ತು. ಇನ್ನು ಇದೀಗ ಈ ಸಂಬಂಧ ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತುದ್ದು, ಈ ಸಂಬಂಧ ತಲೆಮರೆಸಿಕೊಂಡಿದ್ದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಶಂಕಿತ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹಮದ್ ತಾಹಾರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದ್ದು, ಇವರು ನಕಲಿ ದಾಖಲಾತಿಗಳನ್ನು ನೀಡಿ ಕೋಲ್ಕತ್ತಾದಲ್ಲಿ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದರು. ಬಾಡಿಗೆ ಪಡೆಯುವ ಮೊದಲು ಲಾಡ್ಜ್‌ಗಳಲ್ಲಿ ತಂಗಿದ್ದರು ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಈ ಹಿಂದೆ ಪ್ರಕರಣದ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಎನ್‍ಐಎ, ಸಾಕ್ಷಿ ಸಂಗ್ರಹಣೆಗಾಗಿ ಆರೋಪಿಗಳ ಸಹಪಾಠಿಗಳು, ಸ್ನೇಹಿತರು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಐಇಡಿ ತಂದಿದ್ದ ಮುಸಾವೀರ್ ಹಾಗೂ ರೂಪುರೇಷೆ ಸಿದ್ಧಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ತೀರ್ಥಹಳ್ಳಿಯವರಾಗಿದ್ದು, ಇವರಿಗೆ ಸಹಾಯ ಮಾಡಿದ ಮುಜಾಮೀಲ್ ಷರೀಫ್ ಎಂಬಾತನನನ್ನು ಬಂಧಿಸಲಾಗಿದೆ ಅಂತಾ ತಿಳಿಸಿತ್ತು.
ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್‍ಐಎ ಶೋಧಕಾರ್ಯ ನಡೆಸಿದೆ. ಈಗಾಗಲೇ ಇಬ್ಬರು ಆರೋಪಿಗಳ ಪತ್ತೆಗಾಗಿ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು.
ಘಟನೆ ಹಿನ್ನೆಲೆ: ಮಾರ್ಚ್ 1ರಂದು ವೈಟ್‍ಫೀಲ್ಡ್ ಬಳಿಯಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿದ್ದು, ಈ ವೇಳೆ ಕೆಲವರು ಗಾಯಗೊಂಡಿದ್ದರು. ಬಳಿಕ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಲಾಗಿದ್ದು, ಶಂಕಿತ ಉಗ್ರನ ಬಂಧನಕ್ಕೆ ಪೊಲೀಸರು, ಎನ್‌ಐಎ ತಂಡ ಬಲೆ ಬೀಸಿದ್ದರು.












Click it and Unblock the Notifications