ಸಿಡಿಲೇಡಿ ಅತ್ಯಾಚಾರ ಪ್ರಕರಣ ತನಿಖೆ ಕುರಿತು ಎಸ್ಐಟಿ ಸಭೆ
ಬೆಂಗಳೂರು, ಮಾರ್ಚ್ 30 : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಯುವತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸರು ಎಸ್ಐಟಿಗೆ ವರ್ಗಾವಣೆ ಮಾಡಿದ್ದಾರೆ. ಇದರ ಜತೆಗೆ ಸಿಡಿ ಲೇಡಿ ನ್ಯಾಯಾಯಕ್ಕೆ ಹಾಜರಾಗಿ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲಪಂತ್ ಮತ್ತು ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ಅಧಿಕಾರಿಗಳ ಮಹತ್ವದ ಸಭೆ ನಡೆಯುತ್ತಿದೆ.
ಯುವತಿ ಹೇಳಿಕೆಗೆ ಕೋರ್ಟ್ ಅನುಮತಿ : 1ನೇ ಎಸಿಎಂಎಂ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಆಗಿದೆ. 24 ನೇ ಎಸಿಎಂಎಂ ಕೋರ್ಟ್ ನಲ್ಲಿ ಸಿಡಿಲೇಡಿ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು. ಯುವತಿಗೆ ಎಸ್ಐಟಿ ಅಧಿಕಾರಿಗಳ ತನಿಖೆ ಮೇಲೆ ನಂಬಿಕೆ ಇಲ್ಲ. ಆರೋಪಿ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಈಗಾಗಲೇ ಹಲವು ಬೆದರಿಕೆ ಕರೆಗಳು ಬಂದಿವೆ.
ಸಿಡಿ ಪ್ರಕರಣ: ಮಹಾನಾಯಕನಾಗಲು ಹೋಗಿ ಜೈಲುಹಕ್ಕಿ ಖಳನಾಯಕನಾದ ಕಥೆ
ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಅನುಮತಿ ನೀಡಿ ಎಂದು ಸಿಡಿಲೇಡಿ ಪರ ವಕೀಲ ಜಗದೀಶ್ ಕುಮಾರ್ ವಾದ ಮಂಡಿಸಿದ್ದಾರೆ. ಇದರ ಬೆನ್ನಲ್ಲೇ ತನಿಖಾಧಿಕಾರಿ ಕವಿತಾ ಅವರು ಆಕೆಯ ಮುಖವೇ ನೋಡಿಲ್ಲ. ಎಸ್ಐಟಿಯಿಂದ ಯಾವ ರೀತಿಯ ಭದ್ರತೆ ಕೊಡಲು ಸಿದ್ಧವಿದೆ. ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನೀಡಲಾಗಿದೆ ಎಂಬ ವಾದವನ್ನು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದಾರೆ. ಯುವತಿ ಹೇಳಿಕೆಯನ್ನು ಪಡೆಯುತ್ತೇವೆ. ಆನಂತರ ಯುವತಿಯ ಹೇಳಿಕೆಯನ್ನು ತನಿಖಾಧಿಕಾರಿಗಳ ಮುಂದೆ ನೀಡಬಹುದು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅತ್ಯಾಚಾರ ಪ್ರಕರಣ ವರ್ಗಾವಣೆ: ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ, ನಂಬಿಕೆ ದ್ರೋಹ, ವಂಚನೆ ಆರೋಪ ಹೊರಿಸಿ ಸಿಡಿ ಲೇಡಿ ವಕೀಲರ ಮೂಲಕ ಸಲ್ಲಿಸಿರುವ ದೂರನ್ನು ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ನನ್ನು ಕಬ್ಬನ್ ಪಾರ್ಕ್ ಪೊಲೀಸರು ಎಸ್ಐಟಿಗೆ ವರ್ಗಾವಣೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ಹಾಗೂ ಸಿಡಿಲೇಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ಎರಡೂ ಸಹ ಎಸ್ಐಟಿ ಅಧಿಕಾರಿಗಳ ಕೈ ಸೇರಿವೆ. ರಮೇಶ್ ಜಾರಕಿಹೊಳಿ ದಾಖಲಿಸಿದ್ದ ದೂರಿನ ಸಂಬಂಧ ಎಸ್ಐಟಿ ಅಧಿಕಾರಿಗಳು ಬಹುತೇಕ ತನಿಖೆ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಸಿಡಿಲೇಡಿಯ ಅತ್ಯಾಚಾರ ಪ್ರಕರಣ ವರ್ಗಾವಣೆಯಾಗಿದ್ದು, ಪಾರದರ್ಶಕ ತನಿಖೆ ಕುರಿತು ಚರ್ಚೆ ನಡೆಸಿದ್ದಾರೆ.
ಸಿಡಿ ಪ್ರಕರಣ; ಯುವತಿಗೆ ಕಬ್ಬನ್ ಪಾರ್ಕ್ ಪೊಲೀಸರ ನೋಟಿಸ್
ಸಿಡಿ ಲೇಡಿ ಕೋರ್ಟ್ ಗೆ ಎಂಟ್ರಿ ಆದ್ರೆ ?: ಒಂದಡೆ ಎಸ್ಐಟಿ ಅಧಿಕಾರಿಗಳ ತನಿಖೆ ಮೇಲೆ ನಂಬಿಕೆ ಇಲ್ಲ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಸಿಡಿಲೇಡಿ ಮುಖ್ಯ ನ್ಯಾಯಮೂರ್ತಿಗೆ ಇಮೇಲ್ ಮೂಲಕ ಮನವಿ ಮಾಡಿದ್ದರು.
ಇದಾದ ಬಳಿಕ ತಾನು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಿಡಿಲೇಡಿ ಪರ ವಕೀಲರು ಮಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. ಸಿಡಿ ಲೇಡಿ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಅನುಮತಿ ಕೋರಿ ಸಿಡಿಲೇಡಿ ವಕೀಲ ಮಾಡಿದ ವಾದವನ್ನು ಪರಿಗಣಿಸಿ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. ಇದೀಗ ಸಿಡಿಲೇಡಿ ಆಗಮನ ತೀವ್ರ ಕುತೂಹಲ ಕೆರಳಿಸಿದೆ.