Ram Navami 2023 : ರಾಮ ನವಮಿ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ
ಬೆಂಗಳೂರು, ಮಾರ್ಚ್. 29: ರಾಮನವಮಿ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ 30 ರ ಗುರುವಾರದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಪೂರ್ಣ ಮಾಂಸ ಮಾರಾಟ ನಿಷೇಧಿಸಿ ಸೂಚನೆ ಹೊರಡಿಸಿದೆ.
'ಮಾರ್ಚ್ 30ರಂದು ರಾಮನವಮಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ' ಎಂದು ಬಿಬಿಎಂಪಿ ಸೋಮವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಸುತ್ತೋಲೆಯನ್ನು ಜಂಟಿ ನಿರ್ದೇಶಕರು (ಪ್ರಾಣಿ ಕಲ್ಯಾಣ) ಹೊರಡಿಸಿದ್ದಾರೆ.

ಇನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶಕ್ಕೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಇಂತಹ ನಿಷೇಧಗಳು ಇಂಟರ್‌ನೆಟ್ ಆಧಾರಿತ ಮಾಂಸ ಮಾರಾಟಗಾರರಿಗೆ ಸಹಾಯ ಮಾಡಲು ಹೊರಡಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫೆಬ್ರವರಿಯಲ್ಲಿ, ಮಹಾ ಶಿವರಾತ್ರಿ ಸಂದರ್ಭದಲ್ಲಿ ಮಾಂಸ ಮಾರಾಟ ಮತ್ತು ವಧೆ ನಿಷೇಧಿಸಿ ಬಿಬಿಎಂಪಿ ಇದೇ ರೀತಿಯ ಆದೇಶವನ್ನು ಹೊರಡಿಸಿತು.
"ಬೆಂಗಳೂರಿನಲ್ಲಿ ರಾಮ ನವಮಿಯಂದು ಬಿಬಿಎಂಪಿಯಿಂದ ಮಾಂಸ, ಕೋಳಿ ಮತ್ತು ಮೀನು ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಯಮಿತ ನಿಷೇಧಗಳು ಲೂಷಿಯಸ್ ಫುಡ್ಸ್ ತರಹದ ಇಂಟರ್ನೆಟ್ ಆಧಾರಿತ ಪೂರೈಕೆದಾರರಿಗೆ ಸಹಾಯ ಮಾಡುವ ತಂತ್ರವಾಗಿದೆಯೇ...? ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಈ ಇಂಟರ್ನೆಟ್ ಆಧಾರಿತ ಪೂರೈಕೆದಾರರು ನೀಡುವ ಮಾಂಸ, ಟೆಂಡರ್ ಚಿಕನ್ ಇತ್ಯಾದಿ ಹಲಾಲ್ ಪ್ರಮಾಣೀಕರಿಸಲಾಗಿದೆ..? ಎಂದು ಪ್ರಶ್ನಿಸಿದ್ದಾರೆ. ಕಳೆದ ಬಾರಿ ಹಲಾಲ್ ಮಾಂಸ ಮಾಡುವುದಾಗಿ ಲೂಷಿಯಸ್ ಮಾಡಿದ್ದ ಟ್ವೀಟ್ ಒಂದರ ಸ್ಕ್ರೀನ್ ಶಾಟ್ ಕೂಡ ಹಾಕಿದ್ದಾರೆ. ಇನ್ನು ರಾಮ ನವಮಿಗೆ ಮಾಂಸವನ್ನು ಮಾರುವವನುವನ್ನು ನೀಷೇಧಿಸಿರುವುದಕ್ಕೆ ರಾಮ ಕಾಡಿನಲ್ಲಿ ಬೇಟಿಯಾಡುತ್ತಿರುವ ಚಿತ್ರ ಹಾಕಿ ಪ್ರಶ್ನಿಸಲಾಗಿದೆ.

ಕೃಷ್ಣ ಜನ್ಮಾಷ್ಟಮಿಯಂತಹ ಇತರ ಹಬ್ಬಗಳು ಮತ್ತು ಗಾಂಧಿ ಜಯಂತಿಯಂತಹ ಸರ್ಕಾರಿ ರಜಾದಿನಗಳಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯ ಮೇಲೆ ನಾಗರಿಕ ಸಂಸ್ಥೆ ಇದೇ ರೀತಿಯ ನಿಷೇಧವನ್ನು ವಿಧಿಸುತ್ತದೆ. ಬಿಬಿಎಂಪಿ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 3,000 ಪರವಾನಗಿ ಹೊಂದಿರುವ ಮಾಂಸದ ಅಂಗಡಿಗಳು ಮತ್ತು ಮೂರು ಕಸಾಯಿಖಾನೆಗಳು ಅಧಿಕೃತವಾಗಿವೆ.
ಇತ್ತೀಚೆಗೆ ನಡೆದ ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿನ ಅಂತಾರಾಷ್ಟ್ರೀಯ ಏರೋ ಇಂಡಿಯಾ 2023ರ ಹಿನ್ನೆಲೆಯೂ ಮಾಂಸಾಹಾರ ನಿಷೇಧ ಮಾಡಲಾಗಿತ್ತು. ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30 ರಿಂದಲೇ ರಿಂದ ಫೆಬ್ರುವರಿ 20ರವರೆಗೆ ಎಲ್ಲ ತರಹದ ಮಾಂಸ ಮಾರಾಟ ನಿಷೇಧಿಸಲಾಗಿತ್ತು. ಇಷ್ಟೇ ಅಲ್ಲದೇ ಹೋಟೇಲ್ ಹಾಗೂ ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ಸಹ ಬಿಬಿಎಂಪಿ ನಿಷೇಧಿಸಿತ್ತು. ಆದರೆ, ಜನರ ಆಕ್ರೋಶದ ಹಿನ್ನೆಲೆ ಆದೇಶವನ್ನು ವಾಪಸ್ ಪಡೆಯಲಾಗಿತ್ತು.
ಈ ಬಾರಿಯ ರಾಮನವಮಿ ಮಾರ್ಚ್ 30ರಂದು ಇದೆ. ಚೈತ್ರ ನವರಾತ್ರಿಯ ಒಂಬತ್ತನೇ ದಿನ ನವರಾತ್ರಿ ವ್ರತ ಕೊನೆಗೊಂಡು ಉಪವಾಸ ಆಚರಿಸಲಾಗುತ್ತದೆ. ಈ ದಿನ ರಾಮ ನವಮಿಯ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ರಾಮನು ಭೂಮಿಯ ಮೇಲೆ ಜನಿಸಿದನು ಎಂದು ನಂಬಲಾಗಿದೆ. ಆದ್ದರಿಂದ ಈ ದಿನವನ್ನು ರಾಮ ನವಮಿ ಎಂದು ಕರೆಯಲಾಗುತ್ತದೆ.
ಈ ದಿನದಂದು ಶ್ರೀರಾಮನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ವರ್ಷ ರಾಮ ನವಮಿಯಂದು 4 ವಿಶೇಷ ಯೋಗಗಳ ಸಂಯೋಜನೆ ನಡೆಯುತ್ತಿದೆ. ಈ ಬಾರಿ ರಾಮನವಮಿಯ ದಿನದಂದು ಗುರು ಪುಷ್ಯ ಯೋಗ, ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಸೃಷ್ಟಿಯಾಗುತ್ತಿದೆ. ಈ ಎಲ್ಲಾ ಯೋಗಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.












Click it and Unblock the Notifications