Bengaluru Rain: ಬೆಂಗಳೂರಿನಲ್ಲಿ ಮಳೆ ಯಾವಾಗಿನಿಂದ ಶುರು.? ಹವಾಮಾನ ಇಲಾಖೆ ಹೇಳಿದ್ದೇನು?-ಇಲ್ಲಿದೆ ಮಾಹಿತಿ
Bengaluru Rain: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸತತ ಮೂರ್ನಾಲ್ಕು ದಿನಗಳಿಂದಲೂ ಮಳೆರಾಯ ತಂಪೆರೆದಿದ್ದಾನೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಮಾತ್ರ ಮಳೆರಾಯ ಮುನಿಸಿಕೊಂಡಿದ್ದು, ಇದುವರೆಗೂ ಒಂದು ಹನಿಯೂ ಮಳೆಯಿಲ್ಲದೆ ಇಲ್ಲಿನ ಜನರು ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದಾರೆ. ಹಾಗಾದರೆ ಹವಾಮಾನ ಇಲಾಖೆ ಪ್ರಕಾರ ಇಲ್ಲಿ ಯಾವಾಗಿನಿಂದ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯುಗಾದಿ ನಂತರ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಯುಗಾದಿ ನಂತರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಬೆಂಗಳೂರು, ಚಾಮರಾಜನಗರ ಹೊರತುಪಡಿಸಿ ಇನ್ನುಳಿದ ಬಹುತೇಕ ಜಿಲ್ಲೆಗಳಲ್ಲಿಯೂ ಮಳೆರಾಯ ಈಗಾಗಲೇ ಸ್ವಲ್ಪ ಮಟ್ಟಿಗೆ ತಂಪೆರೆದಿದ್ದಾನೆ. ಇನ್ನೂ ಕೆಲೆವೆಡೆ ಅಬ್ಬರದ ಮಳೆಯಾಗಿ ಅನಾಹುತಗಳು ಕೂಡ ಸಂಭವಿಸಿವೆ.

ಇನ್ನೂ ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರೆಯಲಿದ್ದು, ಏಪ್ರಿಲ್ 19ರ ಬಳಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬಿಸಿಲಿನ ಬೇಗೆಗೆ ಬೆಂದು ಬೇಸತ್ತು ಹೋಗಿರುವ ನಗರದ ಜನರು ಮಳೆಗಾಗಿ ಪರಿತಪಿಸುತ್ತಿದ್ದು, ಈ ಭವಿಷ್ಯವಾದರೂ ನಿಜವಾಗಲಿದ್ಯಾ ಎಂದು ಕಾದುನೋಡಬೇಕಿದೆ.
ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಎ.ಪ್ರಸಾದ್ ಮಾತನಾಡಿ, ನಗರದಲ್ಲಿ ನಿರೀಕ್ಷಿತ ಮಳೆ ತುಸು ವಿಳಂಬವಾಗಿದೆ. ಆದರೆ, ಇಲ್ಲಿ ಏಪ್ರಿಲ್‌ನಲ್ಲಿಯೇ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ತಿಂಗಳಲ್ಲಿ ಕನಿಷ್ಠ ಮಳೆಯಾದರೂ ನಾವು ನೋಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಮತ್ತೊಂದೆಡೆ ಇಲ್ಲಿ ಬೇರೆ ಜಿಲ್ಲೆಯಂತೆ ನಿರಂತರ ಮಳೆಯಾಗುವ ಸಂಭವವಿಲ್ಲ ಅಂತಲೂ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ವಾರದಲ್ಲಿ ತಾಪಮಾನ ಕಡಿಮೆಯಾಗಿದೆ. ಏಪ್ರಿಲ್ 6 ರಂದು 37.6 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ, ಏಪ್ರಿಲ್ 13 ರಂದು ಕೇವಲ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಷ್ಟೊತ್ತಿಗೆ ಬೆಂಗಳೂರಿನಲ್ಲಿ ಒಂದೆರಡು ಬಾರಿಯಾದರೂ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಮಳೆಯಿಲ್ಲದೆ ಬರೀ ಬಿಸಿಲಿನ ವಾತಾವರಣವೇ ಮುಂದುವರೆದಿದ್ದು, ಪರಿಣಾಮ ನಗರದ ಹಲವೆಡೆ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗಿದೆ. ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ತೀವ್ರ ನೀರಿನ ಸಮಸ್ಯೆ ಉಂಟಾಗಿದ್ದು, ಇದರಿಂದ ನಗರದ ಜನರು ಬೇಸತ್ತು ಹೋಗಿದ್ದಾರೆ.












Click it and Unblock the Notifications