Vande Bharat Express; ಆ. 15ರಿಂದ ಬೆಂಗಳೂರಿಗೆ ಮತ್ತೊಂದು ರೈಲು?
ಬೆಂಗಳೂರು, ಆಗಸ್ಟ್ 01; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಕರ್ನಾಟಕದಲ್ಲಿ ಎರಡು ವಂದೇ ಭಾರತ್ ರೈಲುಗಳು ಓಡುತ್ತಿವೆ. ಈಗ ಉದ್ಯಾನ ನಗರಿ ಬೆಂಗಳೂರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಆಗಸ್ಟ್‌ನಲ್ಲಿ ನಗರದಿಂದ ಮತ್ತೊಂದು ವಂದೇ ಭಾರತ್ ರೈಲು ಆರಂಭವಾಗುವ ನಿರೀಕ್ಷೆ ಇದೆ.
2022ರ ನವೆಂಬರ್‌ನಲ್ಲಿ ಆರಂಭವಾದ ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಬೆಂಗಳೂರು ಮೂಲಕ ಸಾಗುತ್ತದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ರೈಲು ಮಾತ್ರ ಬೆಂಗಳೂರಿನಿಂದ ಸಂಚಾರ ಆರಂಭಿಸುತ್ತದೆ.

ಬೆಂಗಳೂರು ನಗರದಿಂದ ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ನಗರಗಳಿಗೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂಬ ಬೇಡಿಕೆಗೆ ರೈಲ್ವೆ ಇಲಾಖೆ ಮನ್ನಣೆ ನೀಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಂಗಳೂರು ನಗರದಿಂದ ಆಗಸ್ಟ್ 15ರಿಂದಲೇ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.
ಬೆಂಗಳೂರು-ಹೈದರಾಬಾದ್ ರೈಲು; ಐಟಿ ಕ್ಷೇತ್ರದ ಹಬ್ ಆಗಿರುವ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಈ ಬೇಡಿಕೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 15 ರಿಂದ ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ.
ಹೈದರಾಬಾದ್ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಸೇರುತ್ತದೆ. ಬೆಂಗಳೂರು ನಗರ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿದೆ. ಬೆಂಗಳೂರು-ಹೈದರಾಬಾದ್ ವಯಾ ಕರ್ನೂಲ್ ರೈಲು ಸಂಚಾರವನ್ನು ಆಗಸ್ಟ್‌ನಲ್ಲಿ ಆರಂಭಿಸಲಿದೆ. ಈ ಕುರಿತು ರೈಲ್ವೆ ಸಚಿವಾಲಯದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಸದ್ಯದ ಮಾಹಿತಿ ಪ್ರಕಾರ ಹೈದರಾಬಾದ ನಗರದಿಂದ ಬೆಳಗ್ಗೆ ಹೊರಡುವ ರೈಲು ಮಧ್ಯಾಹ್ನ ಬೆಂಗಳೂರು ತಲುಪಲಿದೆ. ಮಧ್ಯಾಹ್ನ ಬೆಂಗಳೂರು ನಗರದಿಂದ ಹೊರಟು ರಾತ್ರಿ ಹೈದರಾಬಾದ್‌ಗೆ ವಾಪಸ್ ಆಗಲಿದೆ. ರೈಲಿನ ವೇಳಾಪಟ್ಟಿಯನ್ನು ಅಧಿಕೃತವಾಗಿ ಇನ್ನೂ ಬಿಡುಗಡೆ ಮಾಡಿಲ್ಲ. ಉಭಯ ನಗರಗಳ ನಡುವೆ ವಂದೇ ಭಾರತ್ ರೈಲು ಆರಂಭವಾದರೆ ಪ್ರತಿದಿನ ಸಂಚಾರ ನಡೆಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಹೈದರಾಬಾದ್-ಬೆಂಗಳೂರು ನಡುವೆ ಸಂಚಾರ ನಡೆಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಸುಮಾರು 10 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ರೈಲು ಸಂಚಾರದಿಂದ ಸುಮಾರು 6 ಗಂಟೆಯ ಅವಧಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಸುಮಾರು 3 ನಿಲ್ದಾಣಗಳನ್ನು ನೀಡುವ ನಿರೀಕ್ಷೆ ಇದೆ.
ಈ ವರ್ಷದ ಜನವರಿಯಲ್ಲಿಯೇ ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ಮತ್ತು ಕಾಚಿಗೂಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಬಗ್ಗೆ ಮಾಹಿತಿ ನೀಡಿತ್ತು. ಈ ವರ್ಷ ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯೂ ಇರುವುದರಿಂದ ಕೇಂದ್ರ ಸರ್ಕಾರ ವಂದೇ ಭಾರತ್ ರೈಲು ಸಂಚಾರಕ್ಕೆ ಒಪ್ಪಿಗೆಯನ್ನು ನೀಡುವ ಸಾಧ್ಯತೆ ಇದೆ.
ಹೈದರಾಬಾದ್-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಎರಡು ಟೆಕ್ ಹಬ್‌ಗಳನ್ನು ಸಂಪರ್ಕಿಸುವ ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ. ಈಗಾಗಲೇ ತೆಲಂಗಾಣದಲ್ಲಿ ಸಿಕಂದರಾಬಾದ್-ತಿರುಪತಿ, ಸಿಕಂದರಾಬಾದ್-ವಿಶಾಖಪಟ್ಟಣಂ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ.
ಎರಡು ಪ್ರಮುಖ ಐಟಿ ಹಬ್ ನಡುವೆ ವಂದೇ ಭಾರತ್ ರೈಲು ಓಡಿಸಲು ಮೂಲ ಸೌಕರ್ಯಗಳು ಲಭ್ಯವಿದೆ. ಈ ಮಾರ್ಗ ಆದಾಯದ ದೃಷ್ಟಿಯಿಂದಲೂ ರೈಲ್ವೆಗೆ ಸಹಾಯಕವಾಗಲಿದೆ. ಪ್ರಯಾಣಿಕರಿಗೆ ಸಮಯದ ಉಳಿತಾಯವಾಗುವ ಕಾರಣ ಇದೇ ತಿಂಗಳು ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ಚೆನ್ನೈ ಮತ್ತು ತಿರುನಲ್ವೇಲಿ ನಡುವಿನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬಳಿಕ ಆಗಸ್ಟ್ 15ರಂದು ಹೈದರಾಬಾದ್-ಬೆಂಗಳೂರು ಮಾರ್ಗ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ರೈಲ್ವೆ ಇಲಾಖೆ ಇನ್ನೂ ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ.












Click it and Unblock the Notifications