ಮೆಜೆಸ್ಟಿಕ್-ಕೆಂಗೇರಿ ಡಬಲ್ ಡೆಕ್ಕರ್ ಫ್ಲೈ ಓವರ್, ಯೋಜನೆ ವಿವರ
ಬೆಂಗಳೂರು, ಫೆಬ್ರವರಿ 15: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಒಟ್ಟು 4 ಕಾರಿಡಾರ್‌ನ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಈಗ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. 'ಪಾರಿಜಾತ' ಕಾರಿಡಾರ್‌ನಲ್ಲಿ ಈ ಪ್ರಸ್ತಾವಿತ ಯೋಜನೆ ಸೇರಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಕಾರಿಡಾರ್-3 'ಪಾರಿಜಾತ'. 35.5 ಕಿ. ಮೀ. ಉದ್ದದ ಈ ಮಾರ್ಗ 13 ನಿಲ್ದಾಣಗಳನ್ನು ಹೊಂದಿದೆ. ಭವಿಷ್ಯದಲ್ಲಿ ಈ ಮಾರ್ಗವನ್ನು ರಾಮನಗರ, ಮೈಸೂರು, ಬಂಗಾರಪೇಟೆ. ಕೆಜಿಎಫ್ ತನಕ ವಿಸ್ತರಣೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಈ 'ಪಾರಿಜಾತ' ಕಾರಿಡಾರ್‌ನಲ್ಲಿ ರೈಲು ಮತ್ತು ವಾಹನಗಳು ಸಂಚಾರ ನಡೆಸುವ 16 ಕಿ. ಮಿ. ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವನೆ ಇದೆ. ಈ ಫ್ಲೈ ಓವರ್ ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣ ಮತ್ತು ಕೆಂಗೇರಿ ನಡುವೆ ನಿರ್ಮಾಣವಾಗಲಿದೆ. ನಗರದ ಸಂಚಾರ ದಟ್ಟಣೆ ತಪ್ಪಿಸುವಲ್ಲಿ ಈ ಫ್ಲೈ ಓವರ್ ಪ್ರಮುಖ ಪಾತ್ರವಹಿಸಲಿದೆ ಎಂದು ಅಂದಾಜಿಸಲಾಗಿದೆ.
ಡಬಲ್ ಡೆಕ್ಕರ್ ಫ್ಲೈ ಓವರ್ ವಿವರ: ಮನಿ ಕಂಟ್ರೋಲ್ ವರದಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಪ್ರಾಥಮಿಕವಾಗಿ ಈ ಯೋಜನೆಗೆ ಒಪ್ಪಿಗೆ ನೀಡಿವೆ. ಈಗಾಗಲೇ 'ಪಾರಿಜಾತ' ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈಗ ಯೋಜನೆಯಲ್ಲಿ ಬದಲಾವಣೆಯಾಗುವ ಹಿನ್ನಲೆಯಲ್ಲಿ ಹೊಸ ಟೆಂಡರ್ ಕರೆಯಲಾಗುತ್ತದೆ.
ಕೆ-ರೈಡ್ ಮಾಹಿತಿಯಂತೆ ಡಬಲ್ ಡೆಕ್ಕರ್ ಫ್ಲೈ ಓವರ್‌ನಲ್ಲಿ ಮೊದಲ ಹಂತದಲ್ಲಿ ವಾಹನಗಳು ಸಂಚಾರ ನಡೆಸುವ ರಸ್ತೆ, 2ನೇ ಹಂತದಲ್ಲಿ ರೈಲು ಸಂಚಾರಕ್ಕೆ ಮಾರ್ಗ ನಿರ್ಮಾಣವಾಗಲಿದೆ. ಮೆಜೆಸ್ಟಿಕ್-ಕೆಂಗೇರಿ ನಡುವೆ ಈಗಿರುವ ರೈಲು ಮಾರ್ಗದ ಪಕ್ಕದಲ್ಲಿಯೇ ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್ ನಿರ್ಮಾಣವಾಗಲಿದೆ.
ಈ ಫ್ಲೈ ಓವರ್ ನಿರ್ಮಾಣವಾದರೆ ನಗರದ ಕೇಂದ್ರ ಪ್ರದೇಶವಾದ ಮೆಜೆಸ್ಟಿಕ್‌ನಿಂದ ಜಗಜೀವನ್ ರಾಮ್ ನಗರ, ವಿನಾಯಕ ನಗರ, ಕೆಂಗೇರಿ, ನೈಸ್ ರಸ್ತೆ, ಕೆಂಪೇಗೌಡ ಲೇಔಟ್‌ಗೆ ನೇರ ಸಂಪರ್ಕ ಸಿಗಲಿದೆ. ಮೈಸೂರು ರಸ್ತೆ ಮೇಲಿನ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.
ಆದರೆ ಈ 'ಪಾರಿಜಾತ' ಕಾರಿಡಾರ್‌ನಲ್ಲಿ ಬೆಂಗಳೂರು ಕಂಟೋನ್ಮೆಂಟ್ ಸಹ ಸೇರಿದೆ. ಆದ್ದರಿಂದ ಮೆಜೆಸ್ಟಿಕ್‌ನಂತರ ಡಬಲ್ ಡೆಕ್ಕರ್ ಫ್ಲೈ ಓವರ್ ಇರಲಿದೆಯೇ? ಅಥವ ನೆಲದ ಮೇಲೆಯೇ ರೈಲು ಹಾದು ಹೋಗಲಿದೆಯೇ? ಎಂಬುದರ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.
ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಗೊಂಡರೆ ಮೆಜೆಸ್ಟಿಕ್-ಕೆಂಗೇರಿ ನಡುವಿನ ಪ್ರಯಾಣದ ಅವಧಿ 20 ನಿಮಿಷ ಎಂದು ಅಂದಾಜಿಸಲಾಗಿದೆ. ಸದ್ಯ ನಾನ್ ಪೀಕ್ ಅವರ್‌ನಲ್ಲಿ ಸುಮಾರು 1 ಗಂಟೆ ಮತ್ತು ಪೀಕ್ ಅವರ್‌ನಲ್ಲಿ ಅದಕ್ಕಿಂತ ಹೆಚ್ಚು ಸಮಯ ಪ್ರಯಾಣಿಸಬೇಕಿದೆ. ಈ ಯೋಜನೆಗೆ ಸುಮಾರು 2,611 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಜೂನ್ 2024ರಲ್ಲಿ ಆರಂಭವಾಗಿದೆ. ಸುಮಾರು 4 ಕಿ. ಮೀ. ಉದ್ದದ ಫ್ಲೈ ಓವರ್ ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಫ್ಲೈ ಓವರ್ ಮೇಲೆ ಆರ್. ವಿ. ರಸ್ತೆ-ಬೊಮ್ಮಸಂದ್ರ ನಮ್ಮ ಮೆಟ್ರೋ ರೈಲು ಹಾದು ಹೋಗುತ್ತದೆ. ಮೆಟ್ರೋ ಸಂಚಾರ ಇನ್ನೂ ಆರಂಭವಾಗಬೇಕಿದೆ. ಫ್ಲೈ ಓವರ್‌ನ ಮತ್ತೊಂದು ಬದಿಯಲ್ಲಿಯೂ ವಾಹನ ಸಂಚಾರ ಆರಂಭವಾಗಿಲ್ಲ.
ಕೆ-ರೈಡ್ ಮೆಜೆಸ್ಟಿಕ್-ಕೆಂಗೇರಿ ಮಾತ್ರವಲ್ಲ 1.5 ಕಿ. ಮೀ. ಮತ್ತಿಕೆರೆ-ಲೊಟ್ಟೆಗೊಲ್ಲಹಳ್ಳಿ ನಡುವೆ ಸಹ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದ ಯೋಜನೆ ರೂಪಿಸಿದೆ. ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬೆಂಗಳೂರು ನಗರದಲ್ಲಿ ಹಲವು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಗೊಳ್ಳಲಿವೆ ಎಂದು ಹೇಳಿದ್ದರು.












Click it and Unblock the Notifications