AICC ಅಧ್ಯಕ್ಷರ ಪುತ್ರನ ಟ್ರಸ್ಟ್‌ಗೆ KIADB ನಿಯಮಾನುಸಾರ 'ಸಿಎ ನಿವೇಶನ': ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 26: ರಾಜ್ಯದಲ್ಲಿ ಮುಡಾ ಹಗರಣ ಬೆಳಕಿಗೆ ಬಂದು, ಒಂದಷ್ಟು ರಾಜಕೀಯ ಬೆಳವಣಿಗೆಗಳು ನಡೆದ ಬೆನ್ನಲ್ಲೆ, ಟ್ರಸ್ಟ್‌ವೊಂದಕ್ಕೆ ನೀಡಿರುವ ನಿವೇಶನ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ಅವರ 'ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್' ಗೆ ಏರೋಸ್ಪೇಸ್ ಪಾರ್ಕ್ ನಲ್ಲಿ ಸಿ.ಎ. ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ನೀಡಿದ್ದರ ಬಗ್ಗೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಸಚಿವರು ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಹೊಂದಿರುವುದಾಗಿ ಹೇಳಿದ್ದಾರೆ. ಈ ಕಾರಣದಿಂದ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕ್ ನಲ್ಲಿ ಸಿ.ಎ. ನಿವೇಶನ ನೀಡಲಾಗಿದೆ. ಇದರಲ್ಲಿ ಬಿಜೆಪಿ ನಾಯಕ ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮಗಳ ಉಲ್ಲಂಘನೆ ಆಗಲಿ, ಅಕ್ರಮವಾಗಲಿ ಆಗಿಲ್ಲ ಎಂದು ಎಂದು ಸಚಿವರು ಮಾಹಿತಿ ನೀಡಿದರು.

ಕೆಐಎಡಿಬಿ ನಿಯಮಗಳಡಿ ಅಭಿವೃದ್ಧಿ ಚಟುವಟಿಕೆ
ರಾಹುಲ್ ಖರ್ಗೆ ಅವರು ಐಐಟಿ ಪದವೀಧರರಾಗಿದ್ದಾರೆ. ಅವರ ಕುಟುಂಬವು ನಾನಾ ಬಗೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳಲ್ಲಿ ಆರ್ ಆಂಡ್ ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕ್, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಸ್ಥಾಪನೆಗೆ ಅಭಿವೃದ್ಧಿಗೆ ಅವಕಾಶವಿದೆ. ಆದ್ದರಿಂದ ಈ ಬಗ್ಗೆ ಯಾರು ಬೇಕಾದರೂ ಪ್ರಶ್ನಿಸಬಹದು ಎಂದು ಮಾಹಿತಿ ಸೈಟ್ ಮಾರಾಟ ಬಗ್ಗೆ ಅವರು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ನಿವೇಶನ ಮಾರಾಟ ಮಾಡಬೇಕಾದಲ್ಲಿ ಇಲ್ಲಿನ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಶಿಫಾರಸಿನ ನಂತರವಷ್ಟೇ ಇವುಗಳ ಹಂಚಿಕೆ ಮಾಡಲಾಗುತ್ತದೆ. ಏರೋಸ್ಪೇಸ್ ಪಾರ್ಕಿನಲ್ಲಿ ರಾಹುಲ್ ಅವರಿಗೆ ಕೈಗಾರಿಕಾ ನಿವೇಶನವ ನೀಡಲಾಗಿಲ್ಲ. ಬದಲಾಗ ಸಿ.ಎ.ನಿವೇಶನವನ್ನು ಆರ್ ಆಂಡ್ ಡಿ ಕೇಂದ್ರ ಸ್ಥಾಪನೆಗಾಗಿ ನಿಗದಿಪಡಿಸಿದ ಬೆಲೆ ಹಸ್ತಾಂತರಿಸಲಾಗಿದೆ. ಇದರಲ್ಲಿ ರಿಯಾಯಿತಿ ನೀಡಲಾಗಿಲ್ಲ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ರೂ.137 ಕೋಟಿ ನಷ್ಟ
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆ ಭೂಮಿಯನ್ನು ಕೇವಲ ರೂ.50 ಕೋಟಿಗೆ ಮಾರಾಟ ಮಾಡಲಾಗಿತ್ತು. ಇದರಿಂದ ಸರ್ಕಾರದ ಭೊಕ್ಕಸಕ್ಕೆ 137 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಲೆಹರ್ ಸಿಂಗ್ ಅವರು ಈ ಬಗ್ಗೆಯೂ ಚಕಾರ ಎತ್ತಬಹುದಲ್ಲವೇ? ಎಂದು ಅವರು ಪ್ರಶ್ನೆ ಮಾಡಿದರು.
ಏಕ ಗವಾಕ್ಷಿ ಸಮಿತಿ, ಪಾರದರ್ಶಕ ವ್ಯವಸ್ಥೆ ಜಾರಿ
ಈ ಹಿಂದೆ ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯೇ (ಕೆಐಎಡಿಬಿ) ಸಿ.ಎ. ನಿವೇಶನಗಳನ್ನು ಹಂಚಿಕೆ ಮಾಡುತ್ತಿತ್ತು. ಆದರೆ, ನಾನು ಸಚಿವನಾದ ಮೇಲೆ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡಿ, ರಾಜ್ಯದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಲಾಯಿತು. ಅಲ್ಲದೆ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಲೆಹರ್ ಸಿಂಗ್ ಈ ಸತ್ಯವನ್ನು ಅರಿತು ಮಾತನಾಡಬೇಕು ಎಂದು ಅವರು ವಿವರಿಸಿದರು.











Click it and Unblock the Notifications