ಭಾರತ ಐಕ್ಯತಾ ಯಾತ್ರೆಯ ವಿವರ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು ಆಗಸ್ಟ್ 28: "ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ವತಿಯಿಂದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಯಲಿದೆ. ಇನ್ನೂ ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು 225 ಕಿ.ಮೀ. ಸಂಚರಿಸಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದರು.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿರು. ಎಲ್ಲರನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಐಕ್ಯತೆ ಯಾತ್ರೆ ನಡೆಯಲಿದೆ. ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದ್ದರೂ ಸಹ ಇದೊಂದು ಪಕ್ಷಾತೀತ ಯಾತ್ರೆ ಆಗಿರಲಿದೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕರು ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ವಾತಂತ್ರ್ಯ ನಡೆಗೆಗೆ ಸೂಚಿಸಿದ್ದರು. ಅದರಂತೆ ಕರ್ನಾಟಕದ ಪ್ರತಿ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಹಲವು ಕ್ಷೇತ್ರದಲ್ಲಿ 225 ಕಿ. ಮೀ. ಪಾದಯಾತ್ರೆ ಮಾಡಿದ್ದಾರೆ. ನಮ್ಮ ನಾಯಕರು ಕಾರ್ಯಕರ್ತರು ಜನರನ್ನು ತಲುಪುತ್ತಿದ್ದಾರೆ. ಇನ್ನು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಯುವಕರೇ ಹೆಚ್ಚಾಗಿದ್ದರು ಎಂಬುದನ್ನು ಈಗಾಗಲೇ ನಾವೆಲ್ಲರೂ ನೋಡಿದ್ದೇವೆ ಎಂದರು.

ಕನ್ಯಾಕುಮಾರಿ-ಕಾಶ್ಮೀರದವರೆಗಿನ 'ಭಾರತ ಐಕ್ಯತಾ ಯಾತ್ರೆ'
ಉದಯಪುರ ಚಿಂತನ ಮಂಥನ ಶಿಬಿರದಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರು, ಸಂಸದರು ಸೇರಿದಂತೆ ಆರುನೂರು ನಾಯಕರು ಪಾಲ್ಗೊಂಡು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಬಂಧ ಹಲವು ಕಾರ್ಯಕ್ರಮ ಮಾಡುವುದಾಗಿ ತೀರ್ಮಾನಿಸಿದ್ದರೆ. ಅದರಲ್ಲಿ ಪ್ರಮುಖವಾದದ್ದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 'ಭಾರತ ಐಕ್ಯತಾ ಯಾತ್ರೆ' ನಡೆಸುವ ನಿರ್ಧಾರ ಕೈಗೊಳ್ಳಲಾಯಿತು. ನಂತರ ಜಿಲ್ಲೆಗಳಲ್ಲಿ 75 ಕಿ.ಮೀ. ಪಾದಯಾತ್ರೆ ನಡೆಸಲು ಸಹ ನಿರ್ಧರಿಸಲಾಗಿತ್ತು.
ಇನ್ನೂ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ 21ದಿನ ನಡೆಯಲಿದೆ. ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಪಾದಯಾತ್ರೆ ಸಾಗಲಿದೆ. ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ. ನೋಂದಣಿಗೂ ಅವಕಾಶ ಇರಲಿದೆ. ನಿತ್ಯ ಬೆಳಗ್ಗೆ ಸಣ್ಣ ಪ್ರಮಾಣದ ಚರ್ಚೆ ನಡೆಸಿ ನಂತರ ಸಂಜೆವರೆಗೆ ಪಾದಯಾತ್ರೆ ಸಾಗಲಿದೆ.

ಐದು ಉದ್ದೇಶದೊಂದಿಗೆ ಐಕ್ಯತಾ ಯಾತ್ರೆ
ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ನಮ್ಮ ನಾಡು ಶಾಂತಿಯ ತೋಟ ಆಗಬೇಕು. ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದೆ. ಅದರಲ್ಲೂ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಶಕ್ತಿ ತುಂಬಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಿದ್ದು ಯುವಕರಿಗೆ ಉದ್ಯೋಗ ಸಿಗಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು. ರೈತರು ಹಾಗೂ ಕಾರ್ಮಿಕರ ಬದುಕು ಹಸನಾಗಬೇಕು. ಈ ಐದು ಉದ್ದೇಶದೊಂದಿದೆ ಎಲ್ಲ ವರ್ಗದವರನ್ನು ರಕ್ಷಣೆ ಮಾಡುದ್ದ ಮಹತ್ತರ ಉದ್ದೇಶದೊಂದಿಗೆ ಹಾಗೂ ಕನ್ನಡ ನೆಲದಲ್ಲಿ ಕನ್ನಡ ಸೊಗಡು ಸಹಿತ 'ಭಾರತ ಐಕ್ಯತಾ ಯಾತ್ರೆ' ನಡೆಸಲು ತೀರ್ಮಾನಿಸಿದ್ದೇವೆ ಎಂದು ಅವರು ವಿವರಿಸಿದರು.

ನಿತ್ಯ ರಾಜ್ಯದಲ್ಲಿ 25ಕಿ.ಮೀ ಹೆಜ್ಜೆ
ಕರ್ನಾಟದಲ್ಲಿ ನಡೆಯಲಿರುವ ಈ ಪಾದಯಾತ್ರೆ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಪಾದಯಾತ್ರೆಯಲ್ಲಿ ಶಿಕ್ಷಕರು, ನಿವೃತ್ತ ಅಧಿಕಾರಿಗಳು, ಸಂಘ ಸಂಸ್ಥೆಗಳು, ರೈತರು, ಕಾರ್ಮಿಕರು ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ನಿತ್ಯ 25 ಕಿ. ಮೀ. ದೂರದ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಗೆ ಎಲ್ಲ ಜಿಲ್ಲೆಗಳ ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ 3,500 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ ಎಂದರು.
ಸೋಮವಾರ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ನಾಯಕರು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತೇವೆ. ರಾಜ್ಯದ ಪ್ರಮುಖ ನಾಯಕರೆಲ್ಲರೂ ಸೆ. 7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ.
ಬಿ. ಕೆ. ಹರಿಪ್ರಸಾದ್ ಅವರಿಗೆ ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿ ನೀಡಲಾಗಿದೆ. ರಾಷ್ಟ್ರಮಟ್ಟದ ಸಮಿತಿಯಲ್ಲಿ ಕೆ.ಜೆ. ಜಾರ್ಜ್, ಸಲೀಂ ಅಹ್ಮದ್ ಅವರಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಇನ್ನಿತರ ನಾಯಕರಿಗೆ ವಿವಿಧ ಜವಾಬ್ದಾರಿ ವಹಿಸಲಾಗಿದೆ.

ಬಳ್ಳಾರಿಯಲ್ಲಿ ಬೃಹತ್ ಸಮಾವೇಶ
ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲಾ 21ದಿನ ಪಾದಯಾತ್ರೆಯಲ್ಲಿ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಅವರನ್ನು ಆಯ್ಕೆ ಮಾಡಲಾಗುವುದು. ನಾಯಕರು ಸೇರಿದಂತೆ ಎಲ್ಲರ ನೋಂದಣಿಗೆ ಅಧಿಕೃತ ವೆಬ್‌ಸೈಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪಾದಯಾತ್ರೆ ಸುಗಮವಾಗಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಒಂದು ದಿನ ಸಾರ್ವಜನಿಕ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4 ಮತ್ತು 5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಕಾರ್ಯಕ್ರಮಗಳು, ನಡೆಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.











Click it and Unblock the Notifications