ವಿದ್ಯಾರ್ಥಿಗಳ ಜತೆ ರಾಹುಲ್ ಗಾಂಧಿ ಸಂವಾದ
ಬೆಂಗಳೂರು, ಫೆ.15: ಕುಂದಾನಗರಿಯಲ್ಲಿ ಚುಟುಕು ಭಾಷಣ ಮುಗಿಸಿ ಬೆಂಗಳೂರಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ನಂತರ ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ ನಡೆಸಲಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ 'Agenda for Change: Education and Nation Building ಎಂಬ ಅಂಶದ ಬಗ್ಗೆ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ದೇಶದ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದ್ದಾರೆ. [ಕುಂದಾ ನಗರಿಯಲ್ಲಿ ಯುವರಾಜನ ಘರ್ಜನೆ]
ಬೆಂಗಳೂರು ವಿಶ್ವವಿದ್ಯಾಲಯ, ಪುಣೆಯ ಡಿವೈ ಪಾಟೀಲ್ ವಿದ್ಯಾಪೀಠ, ಎನ್ ಐಟಿ ಅಲಹಾಬಾದ್, ಐಐಟಿ ಗುವಾಹಟಿ, ಐಐಎಸ್ ಇಆರ್ ಕೋಲ್ಕತ್ತಾ, ಐಐಎಸ್ ಇಆರ್, ಮೋಹಾಲಿ, ಆರ್ ಜಿಎನ್ ಐವೈಡಿ, ಶ್ರೀಪೆರಂಬದೂರು, ಐಐಟಿ ಭುವನೇಶ್ವರ್ ನ ವಿದ್ಯಾರ್ಥಿಗಳು ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದ ನಂತರ ಆಯ್ಕೆ ಮಾಡಲಾದ ಕೆಲವು ಸಂಪಾದಕರೊಡನೆ ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಹುಲ್ ಗಾಂಧಿ ಅವರು ಸಂವಾದ ನಡೆಸುತ್ತಾರೆ.

ರಾಹುಲ್ ಸಂವಾದದ ಮುಖ್ಯಾಂಶ: ಸಂವಾದ ಕಾರ್ಯಕ್ರಮವನ್ನು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ನಿರೂಪಿಸಿದರು. ಕ್ಯಾಂಪಸಿಗೆ ಬಂದ ರಾಹುಲ್ ಅವರು ಬಯಲು ರಂಗಮಂದಿರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಕುಳಿತರು. ಅವರ ಪಕ್ಕದಲ್ಲಿ ಆಧಾರ್ ರುವಾರಿ ನಂದನ್ ನಿಲೇಕಣಿ ಉಪಸ್ಥಿತರಿದ್ದರು.
* ಸ್ಥಿರ ದೂರವಾಣಿ, ಪಿಸಿಒ ಹಾಗೂ ಈಗ ನೀವು ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳು ರಾಜೀವ್ ಗಾಂಧಿ ಹಾಗೂ ಸ್ಯಾಮ್ ಪಿತ್ರೋಡಾ ಅವರ ಕನಸಿನ ಕೂಸು ಎಂದು ರಾಹುಲ್ ವಿವರಿಸಿದರು.
ಪ್ರಶ್ನೆ: ಇಂಜಿನಿಯರಿಂಗ್, ಮೆಡಿಸನ್ ಬಿಟ್ಟು ಬೇರೆ ಕೋರ್ಸ್ ಮಾಡಿ ಉಳಿಯಲು ಸಾಧ್ಯವೇ?
ರಾಹುಲ್ ಗಾಂಧಿ: ನಿಮ್ಮ ವೃತ್ತಿ ಹಾಗೂ ಕೋರ್ಸ್ ಆಯ್ಕೆ ವಿಷಯದಲ್ಲಿ ನಿರ್ಧಾರ ನಿಮ್ಮದಾಗಬೇಕು. ಪೋಷಕರಿಗೆ ಸಮರ್ಥನೆ ನೀಡಲು ನೀವು ಸಿದ್ಧರಾಗಬೇಕು
ಪ್ರಶ್ನೆ: ಖಾಸಗಿ ವಿವಿ ಹಾಗೂ ಸರ್ಕಾರಿ ಕಾಲೇಜುಗಳ ನಡುವೆ ವ್ಯತ್ಯಾಸದಿಂದಾಗಿ ನಮ್ಮ ಪ್ರತಿಭೆ ವ್ಯರ್ಥವಾಗುತ್ತಿದೆ(ಎಂಎಸ್ ರಾಮಯ್ಯ ಕಾಲೇಜು ವಿದ್ಯಾರ್ಥಿ)
ರಾಹುಲ್ : sun microsystems ನಿಮಗೆ ಗೊತ್ತಾ.. ನಂದನ್(ನಿಲೇಕಣಿ ಅತ್ತ ತಿರುಗಿ) ನೀವು ಹೇಳಿ.. SUN ಸ್ಟಾಂಡ್ ಫಾರ್ಡ್ ವಿವಿ ಜತೆ ಜೋಡಣೆಯಾಗಿದೆ. ಹೀಗಾಗಿ ವ್ಯಾಸಂಗದ ನಂತರ ಉದ್ಯೋಗ ಖಾತ್ರಿಯಾಗಿರುತ್ತದೆ. ಕಾಲೇಜಿನಲ್ಲಿ ಪಾಠದ ಜತೆಗೆ ಉದ್ಯೋಗ ಅನ್ವಯ ಕೋರ್ಸ್ ಗಳನ್ನು ಬೋಧಿಸಬೇಕು. ವಿವಿಗಳಿಂದ ನೇರವಾಗಿ ಕಚೇರಿ ಕಡೆಗೆ ವಿದ್ಯಾರ್ಥಿಗಳು ಹೋಗುವಂಥ ವ್ಯವಸ್ಥೆ ಕಾಣುವಿರಿ...

ಪ್ರಶ್ನೆ: ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿ ಏಕೆ ಬೇಕು? ಆರ್ಥಿಕ ಹಿನ್ನೆಲೆ ಮೇಲೆ ಮೀಸಲಾತಿ ಏಕಿರಬಾರದು?
ಇದಕ್ಕೆ ರಾಹುಲ್ ಉತ್ತರಿಸದೆ ನೆರೆದಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಮೈಕ್ ನೀಡಿದರು. ಕನ್ನಡದಲ್ಲಿ ಉತ್ತರಿಸಿದ ವಿದ್ಯಾರ್ಥಿನಿ 'ಹಳ್ಳಿಗಳಲ್ಲಿ ಇನ್ನೂ ಜಾತಿ ವ್ಯವಸ್ಥೆ ಇದ್ದೇ ಇದೆ ಎಲ್ಲರೂ ಸಾಮಾಜಿಕವಾಗಿ ಆರ್ಥಿಕವಾಗಿ ಸಮಾನತೆ ಸಾಧಿಸುವ ತನಕ ಮೀಸಲಾತಿ ಬೇಕೇ ಬೇಕು' ಎಂದರು.
* ಎಲ್ಲಾ ಕಡೆ ಕಾಲೇಜುಗಳು ಸೀಟುಗಳು ಹೆಚ್ಚಾದರೆ ಇದಕ್ಕೆ ಪರಿಹಾರ ಸಿಗುತ್ತದೆ ಎಂದು ರಾಹುಲ್ ಗೆ ಸರಿಯುತ್ತರ ಶರಣ್ಯ ಎಂಬ ವಿದ್ಯಾರ್ಥಿನಿ ಸಿಕ್ಕಿತು. ನಾವು ಓದುವ ವಿದ್ಯೆ ಸರ್ಟಿಫಿಕೇಟ್ ಹಾಗೂ ಉದ್ಯೋಗಕ್ಕಾಗಿ ಮಾತ್ರ ಇದೆ ಆದರೆ, ನಮ್ಮ ಜ್ಞಾನ ಅನ್ವಯವಾಗುತ್ತಿಲ್ಲ. ದೇಶಕ್ಕೆ ಉಪಯೋಗವಾಗುತ್ತಿಲ್ಲ ಎಂದಾಗ ರಾಹುಲ್ ಒಪ್ಪಿಕೊಳ್ಳಲೇಬೇಕಾಯಿತು.

ಹೆಚ್ಚಿನ ಪ್ರಶ್ನೆಗಳು ಮೀಸಲಾತಿ, ಕೌಶಲ್ಯ ಅಭಿವೃದ್ಧಿ, ಜ್ಞಾನಾಧಾರಿತ ಶಿಕ್ಷಣ, ಮಹಿಳಾ ಸುರಕ್ಷತೆ, ಸರ್ವಶಿಕ್ಷಾ ಅಭಿಯಾನ, ಆರ್ ಟಿಐ ಸುತ್ತಾ ಸುತ್ತುತ್ತಿತ್ತು. ರಾಹುಲ್ ಅವರು ಪ್ರಶ್ನೋತ್ತರಕ್ಕಿಂತ ವಿದ್ಯಾರ್ಥಿಗಳ ಜತೆ ಲವಲವಿಕೆಯಿಂದ ಮಾತನಾಡಲು ಹೆಚ್ಚು ಇಷ್ಟಪಟ್ಟಂತೆ ತೋರಿತು. ಕೃಷ್ಣಭೈರೇಗೌಡ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು 8 ತಾಣಗಳಲ್ಲಿದ್ದ ವಿದ್ಯಾರ್ಥಿಗಳ ಸಂಪರ್ಕ ಒದಗಿಸುತ್ತಾ ಕಾರ್ಯಕ್ರಮ ಸಂಯೋಜನೆ ಸಮರ್ಥವಾಗಿ ಮಾಡಿಕೊಟ್ಟರು.
ಫೆ.16ರಂದು ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 10 ಡಿಎಸ್ಪಿ, 21 ಸಿಪಿಐ, 62 ಪಿಎಸ್ ಐ, 140 ಎಎಸ್ ಐ ಗಳು ಹಾಗೂ 800 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಆಗಮಿಸಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಭೋಪಾಲ್ ನಲ್ಲಿ ಮಹಿಳಾ ಸಮಾವೇಶ ನಡೆಸಿದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರು ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕ ಪ್ರವಾಸದ ನಂತರ ಮಹಾರಾಷ್ಟ್ರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಹರ್ಯಾಣ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳ ಪ್ರವಾಸವನ್ನು ರಾಹುಲ್ ಅವರು ಕೈಗೊಳ್ಳಲಿದ್ದಾರೆ.











Click it and Unblock the Notifications