Kambala: 'ಕಂಬಳ-ಜಲ್ಲಿಕಟ್ಟು' ತಡೆಗೆ ವಿವಿಧ ಅಜೆಂಡಾ ಹೊಂದಿದ ಶಕ್ತಿಗಳ ಯತ್ನ: ಸಂಸದ
ಬೆಂಗಳೂರು, ನವೆಂಬರ್ 26: ಕರ್ನಾಟಕ ಕರಾವಳಿ ಭಾಗದ 'ಕಂಬಳ' (Kambala) ಇದೇ ಮೊದಲ ಭಾರಿಗೆ ಮೂಲ ಸ್ಥಳ ಬಿಟ್ಟು ಬೆಂಗಳೂರಿನಲ್ಲಿ ಆಯೋಜನೆಗೊಂಡ ಇತಿಹಾಸ ಸೃಷ್ಟಿಸಿದೆ. ನ.25-26ರಂದು ಎರಡು ದಿನ ಕಂಬಳ ನಡೆದಿದ್ದು, ಇಂದು ಸಂಪನ್ನಗೊಂಡಿದೆ. ದೇಶೀ ಕ್ರೀಡೆಯು ಆಗಿರುವ ಈ ಸಾಂಪ್ರದಾಯಿಕ ಕಂಬಳ ಮತ್ತು ಜಲ್ಲಿಕಟ್ಟು ತಡೆಗೆ ಕೆಲವು ಪ್ರಯತ್ನ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಭಾನುವಾರ ಬೆಂಗಳೂರಿನಲ್ಲಿ ಎರಡನೇ ದಿನದ ಕಂಬಳ ನಡೆಯಿತು. ಈ ಕುರಿತು ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, ಸನಾತನ ಧರ್ಮ ಉಳಿಸಲು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದರು.

'ಜಲ್ಲಿಕಟ್ಟು'ದಂತಹ ಸಾಂಪ್ರದಾಯಿಕ ಆಟಗಳನ್ನು ನಿಲ್ಲಿಸಲು 'ಕೆಲವು ಅಜೆಂಡಾ ಹೊಂದಿರುವ ಶಕ್ತಿಗಳು' ಪ್ರಯತ್ನಿಸುತ್ತಿವೆ. ಇದಕ್ಕೆ ಅವಕಾಶ ಕೊಡದೇ ಸಾಂಪ್ರದಾಯಿಕ ಕ್ರೀಡೆ ಉಳಿಸಬೇಕು ಎಂದರು.
'ಜಲ್ಲಿಕಟ್ಟು' ಮತ್ತು 'ಕಂಬಳ' ದಂತಹ ನಮ್ಮ ಸಾಂಪ್ರದಾಯಿಕ ಆಟಗಳನ್ನು ತಡೆಯಲು ವಿವಿಧ ಅಜೆಂಡಾಗಳನ್ನು ಹೊಂದಿರುವ ಕೆಲವು ಶಕ್ತಿಗಳು ನ್ಯಾಯಾಲಯಗಳಿಗೆ ಹೋಗುತ್ತಿವೆ. ಕರಾವಳಿ, ಕಾಸರಗೋಡಿನ ಭಾಗದಲ್ಲಿ ನಡೆಯುತ್ತಿದ್ದ ಈ ಸಾಂಪ್ರದಾಯಿಕ ಕ್ರೀಡೆಗಳು ಇಂದು ಬೆಂಗಳೂರಿನಲ್ಲಿ ನಡೆದಿದೆ. ಇದರ ವಿರುದ್ಧ ನ್ಯಾಯಾಲಕ್ಕೆ ತೆರಳಿದ್ದನ್ನು ನಾವು ನೋಡಿದ್ದೇವೆ ಎಂದು ಕಿರಿ ಕಾರಿದರು.
ರಾಜಕೀಯ ಭಿನ್ನಾಭಿಪ್ರಾಯ ಮೀರಿ ಒಗ್ಗೂಡಬೇಕು
ನಾವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಪಕ್ಷಗಳು ಒಗ್ಗೂಡಬೇಕು. ಈ ಮೂಲಕ ಜಲ್ಲಿಕಟ್ಟು, ಕಂಬಳ ಹಾಗೂ ನಮ್ಮ ಹಬ್ಬಗಳ ಆಚರಣೆಯನ್ನು ರಕ್ಷಿಸಬೇಕು. ಏಕೆಂದರೆ ಈ ಆಟಗಳನ್ನು ಉಳಿಸಿದರೆ ಮಾತ್ರ ನಮ್ಮ ಸನಾತನ ಧರ್ಮವನ್ನು ಉಳಿಸಲು ಸಾಧ್ಯ ಎಂದರು.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಕಂಬಳ ನಡೆದಿದ್ದು, ಒಟ್ಟು 178 ಜೋಡಿ ಎಮ್ಮೆಗಳು ಈ ಓಟದಲ್ಲಿ ಭಾಗವಹಿಸಿದ್ದವು ಎಂದು ಆಯೋಜಕರು ತಿಳಿಸಿದ್ದಾರೆ. ಸುಮಾರು ಎರಡು ತಿಂಗಳಿಗೂ ಮೊದಲೇ ಅಗತ್ಯ ತಯಾರಿ ನಡೆದಿದೆ. ಕರಾವಳಿಯಿಂದ ಎಮ್ಮೆಗಳಿಗೆ ಕುಡಿಯಲು ನೀರು ತರಿಸಲಾಗಿತ್ತು. ಎಮ್ಮೆಗಳ ವಿಶ್ರಾಂತಿಗೆ, ಅವುಗಳ ನಿರ್ವಹಣೆಗೆ ಶೆಡ್ ವ್ಯವಸ್ಥೆ, ಮೇವು ಎಲ್ಲದನ್ನು ನೋಡಿಕೊಳ್ಳಲಾಗಿದೆ. ಅರಮನೆ ಮೈದಾನದಲ್ಲಿ ನಡೆದ ಕಂಬಳವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಮೈದಾನದಲ್ಲಿದ್ದ ಕರಾವಳಿಯ ಸಿಫುಡ್ ಸವಿದಿದ್ದಾರೆ.












Click it and Unblock the Notifications