Pulse Polio Drive: ಜಿಬಿಎ ವ್ಯಾಪ್ತಿಯಲ್ಲಿ 11.34 ಲಕ್ಷ ಮಕ್ಕಳಿಗೆ ಪೊಲೀಯೋ ಲಸಿಕೆ: ಪ್ಲಾನ್ ಹೇಗಿದೆ ಗೊತ್ತಾ?
ಬೆಂಗಳೂರು, ಡಿಸೆಂಬರ್ 15: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಇದೇ ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳ ಕಾಲ 'ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ' ನಡೆಯಲಿದೆ. ಐದು ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಶೇಕಡಾ 100ರಷ್ಟು ಪಲ್ಸ್ ಪೋಲಿಯೋ ಗುರಿ ಸಾಧಿಸಬೇಕೆಂದು ಜಿಬಿಎ ಮುಖ್ಯ ಆಯಯುಕ್ತರಾದ ಮಹೇಶ್ವರ್ ರಾವ್ ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಇಂದು ಸೋಮವಾರ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕುರಿತು ವರ್ಚುವಲ್ ಮೂಲಕ ಮಹತ್ವದ ಸಭೆ ನಡೆಸಿದರು. ಮೂರು ದಿನದ ಎಲ್ಲಾ 5 ನಗರ ಪಾಲಿಕೆಗಳ ಸಿಬ್ಬಂದಿ, ಅಧಿಕಾರಿಗಳು ಅಭಿಯಾನ ಯಶಸ್ವಿಗೆ ಕ್ರಮವಹಿಸಬೇಕು. ತಮ್ಮ ಮಕ್ಕಳಿಗೆ ಲಸಿಕೆ ಪಡೆಯುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ನರ್ಸಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೇ ಮತ್ತು ಮೆಟ್ರೊ ನಿಲ್ದಾಣ, ಮಾಲ್ ಗಳು, ಪ್ರಮುಖ ಉದ್ಯಾನವನಗಳು, ಪ್ರವಾಸಿ ತಾಣಗಳು, ಕೇಕ್ ಪ್ರದರ್ಶನ, ಕೊಳಗೇರಿ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಸಂಚಾರಿ ಲಸಿಕಾ ತಂಡಗಳನ್ನು ನಿಯೋಜಿಸುವ ಕೆಲಸವಾಗಬೇಕು.
ಅಪಾರ್ಟ್ಮೆಂಟ್ ಸಂಘಗಳು ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ
ಜಿಬಿಎ ವ್ಯಾಪ್ತಿಯಲ್ಲಿ 2,700ಕ್ಕೂ ಅಧಿಕ ಅಪಾರ್ಟ್ಮೆಂಟ್ ಗಳು ಬರಲಿವೆ. ಅಪಾರ್ಟ್ ಮೆಂಟ್ ಸಂಘಗಳ ಜೊತೆ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರ್ಮಿಸುವ ಪೊಲಿಯೋ ಲಸಿಕಾ ಬೂತ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಬೇಕೆಂದು ನಿರ್ದೇಸಿದರು.

ಪೊಲಿಯೋ ಹಾಕಲು ಮನೆ-ಮನೆಗೆ ಭೇಟಿ
ಜಿಬಿಎ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಎಸ್.ಎಸ್ ಮದನಿ ಅವರು ಮಾತನಾಡಿ, ನಗರದಲ್ಲಿ 2025ರ ಡಿಸೆಂಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬೂತ್ ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಡಿಸೇಂಬರ್ 22 ರಿಂದ 24 ರವರೆಗೆ ಮನೆ-ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. 21 ರಿಂದ 24 ರವರೆಗೆ 4 ದಿನಗಳ ಕಾಲ ಹೆಚ್ಚು ಜನದಟ್ಟಣೆ ಹೊಂದಿರುವ ಪ್ರದೇಶ, ಕೋಳಗೇರಿ ಪ್ರದೇಶಗಳು, ವಲಸಿಗರ ಪ್ರದೇಶ ಸೇರಿದಂತೆ ಇನ್ನಿತರ ಕಡೆ ಸಂಚಾರಿ ಲಸಿಕಾ ತಂಡಗಳನ್ನು ನಿಯೋಜಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ನವಜಾತ ಶಿಶುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ 2 ಹನಿಗಳ ಪಾಲಿಯೋ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಈ ಹನಿಗಳನ್ನು ನಮ್ಮ ಕ್ಲಿನಿಕ್‌ಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಹೆರಿಗೆ ಆಸ್ಪತ್ರೆಗಳಲ್ಲಿ, ರೆಫರಲ್ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು.
ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಈ ಪೈಕಿ ಆಟೋ ಟಿಪ್ಪರ್ ಗಳ ಸಹಾಯದಿಂದ ಧ್ವನಿ ವರ್ಧಕಗ ಮೂಲಕ ಹಾಗೂ ನಮ್ಮ ಮೆಟ್ರೋ, ಮಾಲ್ ಗಳು, ಚಿತ್ರಮಂದಿರಗಳಲ್ಲಿಯೂ ಸಹ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
11.34 ಲಕ್ಷ ಮಕ್ಕಳಿಕೆ ಪೋಲಿಯೋ ಹನಿ ಹಾಕುವ ಗುರಿ
ಐದೂ ನಗರ ಪಾಲಿಕೆಗಳಲ್ಲಿ 11,34,988 ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿ ಹಾಕುವ ಗುರಿಯಿದೆ. ಈ ಪೈಕಿ ನಗರದಾದ್ಯಂತ 3,391 ಬೂತ್‌ಗಳು, 601 ಸಂಚಾರಿ ತಂಡ, 460 ಮೊಬೈಲ್ ತಂಡ ಸೇರಿದಂತೆ ಒಟ್ಟು 4,452 ಬೂತ್ಸ್ ಗಳ ಮೂಲಕ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ. ನಗರದಲ್ಲಿ 17,808 ಸ್ವಯಂಸೇವಕರನ್ನು ಲಸಿಕೆ ಹಾಕಲು ನಿಯೋಜಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೆಲ್ಲದರ ಮೇಲ್ವಿಚಾರಣೆಗೆ 881 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದೆಲ್ಲ ಪ್ಲಾನ್‌ಗಳು ಯಶಸ್ವಿಯಾಗಲು ಅಧಿಕಾರಿಗಳ ಜೊತೆಗೆ ಅರ್ಹ ಮಕ್ಕಳ ಪೋಷಕರು ಕೈ ಜೋಡಿಸಬೇಕಿದೆ.












Click it and Unblock the Notifications