ಪೋಷಕರೇ ಹುಷಾರ್: ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡಿಸುವ ಆಮಿಷ: ಬೆಂಗಳೂರಿನಲ್ಲಿ ₹22 ಲಕ್ಷ ವಂಚನೆ
ಬೆಂಗಳೂರು: ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗಿರುವ ಕಾಳಜಿಯನ್ನೇ ಬಂಡವಾಳವಾಗಿಸಿಕೊಂಡು ಸೈಬರ್ ವಂಚಕರು ಹೊಸ ಹೊಸ ತಂತ್ರಗಳ ಮೂಲಕ ಹಣ ದೋಚುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಗಳಿಗೆ ಹೆಚ್ಚಿನ ಅಂಕ ಕೊಡಿಸುವುದಾಗಿ ನಂಬಿಸಿ ಪೋಷಕರಿಂದ ಬರೋಬ್ಬರಿ 22 ಲಕ್ಷ ರೂಪಾಯಿಗಳನ್ನು ದೋಚಲಾಗಿದೆ.
ಈ ಸಂಬಂಧ ಕಂಗಾಲಾದ ಸಂತ್ರಸ್ತ ಪೋಷಕರು ಇದೀಗ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ, ಅದರಲ್ಲೂ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಸಿಗುವುದಿಲ್ಲ ಎಂಬ ಭಯ ಪೋಷಕರಲ್ಲಿ ಸಹಜವಾಗಿ ಇರುತ್ತದೆ. ಇದೇ ಅಂಶವನ್ನ ಗುರಿಯಾಗಿಸಿಕೊಂಡ ಖದೀಮರು, ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಈ ಭಾರೀ ವಂಚನೆ ಎಸಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ವಂಚನೆ: ವಂಚಕರ ಜಾಲಕ್ಕೆ ಬಿದ್ದ ಪೋಷಕರು
ಸೈಬರ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ವಂಚಕರು ನೇರವಾಗಿ ವಿದ್ಯಾರ್ಥಿನಿಯ ತಂದೆಗೆ ಮೊಬೈಲ್ ಮೂಲಕ ಕರೆ ಮಾಡಿದ್ದಾರೆ. ತಾವು ಪಿಯು ಬೋರ್ಡ್‌ನ ಹಿರಿಯ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿರುವ ಆರೋಪಿಗಳು, "ನಿಮ್ಮ ಮಗಳು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ವಿಜ್ಞಾನದ ಪ್ರಮುಖ ವಿಷಯಗಳಲ್ಲಿ ಅತ್ಯಂತ ಕಡಿಮೆ ಅಂಕಗಳನ್ನ ಪಡೆಯುವ ಸಾಧ್ಯತೆಯಿದೆ. ಇದರಿಂದ ಆಕೆಯ ಭವಿಷ್ಯಕ್ಕೆ ತೊಂದರೆಯಾಗಬಹುದು" ಎಂದು ಆತಂಕ ಸೃಷ್ಟಿಸಿದ್ದಾರೆ.
ಪೋಷಕರು ಭಯಗೊಂಡಿರುವುದನ್ನ ಅರಿತ ವಂಚಕರು, ತಮಗೆ ಹಣ ನೀಡಿದರೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುವ ಹಂತದಲ್ಲಿಯೇ ಒಳಗಿನ ಅಧಿಕಾರಿಗಳ ಮೂಲಕ ಅಂಕಗಳನ್ನ ತಿದ್ದಿ, ಮಗಳಿಗೆ ಹೆಚ್ಚಿನ ಅಂಕ ಬರುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.
ನೀಟ್ ವೈದ್ಯಕೀಯ ಸೀಟು ವಂಚನೆ: ಸುಲಭವಾಗಿ ಸೀಟು ಸಿಗುವ ಆಮಿಷ
ಕೇವಲ ಪಿಯುಸಿ ಅಂಕಗಳ ಬಗ್ಗೆ ಮಾತ್ರವಲ್ಲದೆ, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ವಂಚಕರು ಪ್ರಸ್ತಾಪಿಸಿ ಬಲೆ ಹೆಣೆದಿದ್ದಾರೆ. "ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ನಿಮ್ಮ ಮಗಳಿಗೆ ಒಳ್ಳೆಯ ಅಂಕಗಳು ಬಂದರೆ, ಮುಂಬರುವ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಪಡೆಯಲು ಸಹಾಯಕವಾಗುತ್ತದೆ. ಇದರಿಂದ ಆಕೆಗೆ ಸರ್ಕಾರಿ ಕೋಟಾದಡಿ ಸುಲಭವಾಗಿ ವೈದ್ಯಕೀಯ ಸೀಟು ಸಿಗುತ್ತದೆ" ಎಂದು ಸುಳ್ಳು ಕಥೆ ಕಟ್ಟಿ ನಂಬಿಸಿದ್ದಾರೆ.
ಮಗಳ ಭವಿಷ್ಯದ ದೃಷ್ಟಿಯಿಂದ ಸುಲಭವಾಗಿ ವೈದ್ಯಕೀಯ ಸೀಟು ಸಿಗಲಿ ಎಂಬ ಆಸೆಯಿಂದ ತಂದೆ, ವಂಚಕರ ಈ ಎಲ್ಲಾ ಮಾತುಗಳನ್ನ ಕುರುಡಾಗಿ ನಂಬಿದ್ದಾರೆ. ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು 22 ಲಕ್ಷ ರೂಪಾಯಿಗಳನ್ನ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ಬೆಂಗಳೂರು ಸೈಬರ್ ಕ್ರೈಮ್: ಹಣ ಕಳೆದುಕೊಂಡು ದೂರು ನೀಡಿದ ತಂದೆ
ಹಣ ಪಾವತಿಸಿದ ಬಳಿಕ ಪೋಷಕರು ಮಗಳು ಪರೀಕ್ಷೆಯಲ್ಲಿ ಟಾಪರ್ ಆಗುತ್ತಾಳೆ ಎಂದೇ ಭಾವಿಸಿದ್ದರು. ಆದರೆ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ, ತಮ್ಮ ಮಗಳ ಅಂಕಗಳಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲದಿರುವುದು, ಮತ್ತು ಆಕೆ ಬರೆದಷ್ಟೇ ಅಂಕಗಳು ಫಲಿತಾಂಶದಲ್ಲಿ ಬಂದಿರುವುದು ಕಂಡುಬಂದಿದೆ.
ಕೂಡಲೇ ತಮಗೆ ಕರೆ ಮಾಡಿದ್ದ ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ಎಲ್ಲಾ ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿದ್ದವು. ಆಗ ತಾವುಸೈಬರ್ ವಂಚನೆಗೆ ಒಳಗಾಗಿರುವುದು ಅವರಿಗೆ ಅರಿವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು, ಸೈಬರ್ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನ ವಿವರಿಸಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಕರೆ ಮಾಡಿದ್ದ ಮೊಬೈಲ್ ಸಂಖ್ಯೆಗಳ ಕರೆ ವಿವರ ಹಾಗೂ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪೋಷಕರು ಯಾವುದೇ ಕಾರಣಕ್ಕೂ ಇಂತಹ ವಂಚಕರ ಕರೆಗಳನ್ನ ನಂಬಬಾರದು, ಶಿಕ್ಷಣ ಇಲಾಖೆಯ ಮೌಲ್ಯಮಾಪನ ಪ್ರಕ್ರಿಯೆ ಅತ್ಯಂತ ಕಟ್ಟುನಿಟ್ಟಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications
