ಪಿಎಸ್‌ಐ ನೇಮಕಾತಿ ಹಗರಣ: IPS ಅಧಿಕಾರಿ ಅಮೃತ್ ಪಾಲ್‌ರ 'ಡಬಲ್ ಜೀರೋ' ಕೋಡ್ ರಿವಿಲ್
ಬೆಂಗಳೂರು, ಸೆಪ್ಟೆಂಬರ್ 29: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಜಾಲದಲ್ಲಿ ಬಂಧಿತರಾಗಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಮೃತ್ ಪಾಲ್‌ಗೆ ಬೇನಾಮಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಶಂಭುಲಿಂಗಸ್ವಾಮಿ ನಡುವೆ ಹಣಕಾಸಿನ ವ್ಯವಹಾರದಲ್ಲಿದ್ದ 'ಡಬಲ್ ಜೀರೋ' ಕೋಡ್ ಅನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪರೀಕ್ಷಾ ನೇಮಕಾತಿ ಜಾಲದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 35ನೇ ಆರೋಪಿಯಾಗಿರುವ ಅಮೃತ್ ಪಾಲ್ ವಿರುದ್ಧ 1406 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಐಡಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಕೆಯನ್ನು ಮಾಡಲಾಗಿದೆ.
ಅಮೃತ್ ಪಾಲ್ ಎಸಗಿರುವ ಅಕ್ರಮವನ್ನು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿರುವ ಸಿಐಡಿ, ಆಭ್ಯರ್ಥಿಗಳಿಂದ ಪಡೆದ ಹಣವನ್ನು ಯಾರಿಗೂ ತಿಳಿಯದಂತೆ ವ್ಯವಹಾರ ನಡೆಸಬೇಕು ಎಂಬುದರ ಬಗ್ಗೆ ಸಹಕಾರ ನಗರದ ನಿವಾಸಿ ಉದ್ಯಮಿ ಶಂಭುಲಿಂಗಸ್ವಾಮಿಯೊಂದಿಗೆ ಮಾತುಕತೆ ನಡೆಸಿದ್ದರು. ಆಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಿಂದ ಪಡೆದಿದ್ದ ಹಣವನ್ನು ಪಾಲ್ ನೇರವಾಗಿ ತೆಗೆದುಕೊಳ್ಳದೆ ಶಂಭುಲಿಂಗಸ್ವಾಮಿ ಮೂಲಕ ವ್ಯವಹರಿಸುತ್ತಿದ್ದರು. ಹಲವು ಅಭ್ಯರ್ಥಿಗಳಿಂದ 1.41 ಕೋಟಿ ರೂಪಾಯಿ ಹಣವನ್ನು ಶಂಭುಲಿಂಗ ತೆಗೆದಿರಿಸಿಕೊಂಡಿದ್ದ. ಆಭ್ಯರ್ಥಿಗಳಿಂದ ಪಡೆದುಕೊಂಡ ಹಣವನ್ನು ಕಂಪ್ಯೂಟರ್‌ನಲ್ಲಿ ಟೈಪಿಸಿಕೊಂಡು ಪೆನ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಂಡಿದ್ದ.

ಹಣಕಾಸಿನ ವಿಚಾರ ಕಂಪ್ಯೂಟರ್‍ನಲ್ಲಿ ನಮೂದು
ಅಕ್ರಮಕ್ಕಾಗಿ ಯಾವ್ಯಾವ ಆಭ್ಯರ್ಥಿಗಳು ಎಷ್ಟು ಹಣ ಕೊಟ್ಟಿರುವ ಬಗ್ಗೆ ಕಂಪ್ಯೂಟರಿನಲ್ಲಿ ನಮೂದಿಸಿದ್ದ ಶಂಭುಲಿಂಗ ಅಕ್ರಮ ಹಣದ ಬಗ್ಗೆ ಯಾರಿಗೂ ಗೊತ್ತಾಗದಿರಲು ಪಾಲ್ ಜೊತೆ ಕೊಡ್ ವರ್ಡ್ ಇಟ್ಟುಕೊಂಡಿದ್ದ. ಉದಾಹರಣೆಗೆ ಅಭ್ಯರ್ಥಿಯೋರ್ವ 10 ಲಕ್ಷ ನೀಡಿದರೆ ಈತ ಎಂಟ್ರಿ ಮಾಡಿಕೊಳ್ಳುತಿದ್ದದ್ದು ಕೇವಲ 10 ಸಾವಿರ ಮಾತ್ರ, 5 ಲಕ್ಷ ನೀಡಿದರೆ 5 ಸಾವಿರ ಮಾತ್ರ ಬರೆದುಕೊಳ್ಳುತ್ತಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪನ್‌ಡ್ರೈವ್ ಅಡಗಿತ್ತು ಕೋಡ್ ವರ್ಡ್
ಸಹಕಾರ ನಗರದಲ್ಲಿರುವ ಅಮೃತ್ ಪಾಲ್ ಎದುರುಮನೆ ನಿವಾಸಿ ಶಂಭುಲಿಂಗ ಪಾಲ್ ಪರವಾಗಿ ಅಭ್ಯರ್ಥಿಗಳಿಂದ 2 ಕೋಟಿ ರೂಪಾಯಿ ಪಡೆದುಕೊಂಡಿದ್ದ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡು ಸಿಐಡಿ ದಾಳಿ ನಡೆಸಿದಾಗ ಪೆನ್‌ಡ್ರೈವ್ ವಶಕ್ಕೆ ಪಡೆದುಕೊಂಡಿತ್ತು. ಪರಿಶೀಲನೆ ನಡೆಸಿ ಇಬ್ಬರನ್ನು ವಿಚಾರಣೆ ನಡೆಸಿದಾಗ ಕೋಡ್ ವರ್ಡ್ ಇಟ್ಟಿಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆನ್ ಡ್ರೈವ್‌ನಲ್ಲಿ ಆರಕ್ಕಿಂತ ಹೆಚ್ಚು ಆಭ್ಯರ್ಥಿಗಳ ಹೆಸರು ಇರುವ ಬಗ್ಗೆ ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಡಿವೈಎಸ್ಪಿ ಬಿ.ಕೆ.ಶೇಖರ್ ನ್ಯಾಯಾಲಯಕ್ಕೆ ಸಲ್ಲಿಕೆ
ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣ ಸಂಬಂಧ ಎಡಿಜಿಪಿ ಅಮೃತ್ ಪಾಲ್ ವಿರುದ್ಧ ಸಿಐಡಿ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪರೀಕ್ಷಾ ನೇಮಕಾತಿ ಜಾಲದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ ನ್ಯಾಯಾಲಯಕ್ಕೆ ಅಮೃತ್ ಪಾಲ್ ವಿರುದ್ಧ 1406 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದರು.

ನೇಮಕಾತಿ ಜಾಲದಲ್ಲಿ ಪಾಲ್ ಕೈವಾಡ
ಇದಕ್ಕೆ ಮೊದಲು ಸಲ್ಲಿಸಿದ್ದ ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಹೆಸರು ಉಲ್ಲೇಖಿಸಲಿರಲಿಲ್ಲ. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 35ನೇ ಆರೋಪಿಯಾಗಿರುವ ಪಾಲ್ ವಿರುದ್ಧ 78 ದಾಖಲೆಗಳು, 38 ಸಾಕ್ಷಿಗಳು ಒಳಗೊಂಡ 1406 ಪುಟಗಳ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ನೇಮಕಾತಿ ಜಾಲದಲ್ಲಿ ಪಾಲ್ ಕೈವಾಡ, ಅಕ್ರಮ ಎಸಗಲು ಯಾರ ರೀತಿ ಸಂಚು ರೂಪಿಸಿದ್ದರು? ಅಭ್ಯರ್ಥಿಗಳಿಂದ ಪಡೆದ ಹಣ ಸೇರಿದಂತೆ ಹಲವು ಅಂಶಗಳ ಬಗ್ಗೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications