PSI Recruitment Scam: ಪಿಎಸ್ಐ ನೇಮಕಾತಿ ಹಗರಣ: ಆರ್.ಡಿ.ಪಾಟೀಲ್ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು ಏಪ್ರಿಲ್ 19: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್ ಆಗಿರುವ ರುದ್ರಗೌಡ ಪಾಟೀಲ್ ಅಲಿಯಾಸ್ ಆರ್.ಡಿ. ಪಾಟೀಲ್ ವಿರುದ್ಧ ರಾಜ್ಯದ ವಿವಿಧ ಕಡೆ ದಾಖಲಾಗಿರುವ 11 ಪ್ರಕರಣಗಳ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಇದರಿಂದಾಗಿ ಪಾಟೀಲ್ ಸದ್ಯಕ್ಕೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಜೊತೆಗೆ ಬಲವಂತದ ಕ್ರಮ ಬೇಡ ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ಪ್ರತ್ಯೇಕವಾಗಿ ದಾಖಲಾಗಿರುವ 11 ಪ್ರಕರಣಗಳನ್ನೂ ಒಂದೇ ಕೋರ್ಟ್ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಕೋರಿ ಆರ್.ಡಿ. ಪಾಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪಾಟೀಲ್ ವಿರುದ್ಧ ಕಲಬುರಗಿಯ ಚೌಕ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಒಂದು ಪ್ರಕರಣ, ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣ, ಅಶೋಕ್ ನಗರ ಠಾಣೆಯಲ್ಲಿ ದಾಖಲಾಗಿರುವ ಐದು ಪ್ರಕರಣ, ಬೆಂಗಳೂರಿನ ರಾಮಮೂರ್ತಿ ನಗರ, ತುಮಕೂರಿನ ಕ್ಯಾತಸಂದ್ರ ಹಾಗೂ ಧಾರವಾಡದ ಉಪ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಪ್ರಕರಣಗಳ ಮುಂದಿನ ಪ್ರಕ್ರಿಯೆಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಲ್ಲದೇ, ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿ ಪಾಟೀಲ್ ಅವರನ್ನು ಪೋಲಿಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಅರ್ಜಿದಾರ ಪರ ವಕೀಲರು ಆತಂಕ ವ್ಯಕ್ತಪಡಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಗಳ ಮುಂದಿನ ಮುಂದಿನ ವಿಚಾರಣೆವರೆಗೆ ಪಾಟೀಲ್ ವಿರುದ್ಧ ಯಾವುದೇ ಬಲದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆಯನ್ನು 30ಕ್ಕೆ ಮುಂದೂಡಿದೆ.

ಜೊತೆಗೆ ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ಪ್ರತ್ಯೇಕವಾಗಿ ದಾಖಲಾಗಿರುವ 11 ಪ್ರಕರಣಗಳನ್ನು ಒಂದೇ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ನಿರ್ದೇಶಿಸಬೇಕೆಂಬ ಅರ್ಜಿದಾರನ ಮನವಿ ಕುರಿತು ಹೈಕೋರ್ಟ್ ತೀರ್ಮಾನ ಕೈಗೊಳ್ಳಬೇಕಿದೆ.
ಪ್ರಕರಣದ ಹಿನ್ನೆಲೆ ಏನು?
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುಗಿರಯ ಚೌಕ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಪ್ರಧಾನ ಪ್ರಕರಣದಲ್ಲಿ ಅರ್ಜಿದಾರ ಆರ್.ಡಿ. ಪಾಟೀಲ್ ಅವರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಅವರ ವಿರುದ್ಧ 11 ಪ್ರಕರಣಗಳು ಬಾಕಿಯಿದೆ. ಈ ಪೈಕಿ ಎಂಟು ಕಲಬುರಗಿ ವಿವಿಧ ಠಾಣೆಗಳಲ್ಲಿ, ಧಾರವಾಡ, ಬೆಂಗಳೂರು ಮತ್ತು ತುಮಕೂರಿನ ಬೇರೆ ಬೇರೆ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಿಸಲಾಗಿದೆ. ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಒಂದೇ ಕೋರ್ಟ್‌ನಲ್ಲಿ ವಿಚಾರಣೆ ನಡೆಸಬೇಕು ಎಂದು ಪಾಟೀಲ್ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿ, ಮೂಲ ಅರ್ಜಿ ಇತ್ಯರ್ಥಪಡಿಸುವರೆಗೆ ಎಲ್ಲಾ ಪ್ರಕರಣಗಳ ಮುಂದಿನ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದರು.












Click it and Unblock the Notifications